ಅರಣ್ಯ ಇಲಾಖೆ ಸರ್ವೆ ಪ್ರಕಾರದ ಕೃಷಿ ಭೂಮಿ ರೈತರಿಗೆ ಹಸ್ತಾಂತರಕ್ಕೆ ಒತ್ತಾಯ
ಅರಣ್ಯ ಇಲಾಖೆಯಿಂದ ಸರ್ವೆ ಪ್ರಕಾರದ ಕೃಷಿ ಭೂಮಿ ರೈತರಿಗೆ ಹಸ್ತಾಂತರಕ್ಕೆ ಒತ್ತಾಯ
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹರಟಿ ಪ್ರಕಾಶ್ ರೈತರಿಗೆ ಭೂಮಿ ಹಿಂತಿರುಗಿಸಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.


ಕೋಲಾರ, ೨೧ ಜುಲೈ (ಹಿ.ಸ):

ಆ್ಯಂಕರ್ : ರೈತರ ೨೫೦ ಎಕರೆ ಹಾಗೂ ಕಂದಾಯ ಇಲಾಖೆಗೆ ಸೇರಿದ ೧೮೦ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೂಡಲೇ ತೆರವುಗೊಳಿಸಿ ರೈತರಿಗೆ ಕೃಷಿಗಾಗಿ ಹಸ್ತಾಂತರಿಸಬೇಕು ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹರಟಿ ಪ್ರಕಾಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಕೋಲಾರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವು ಕಾರ್ಯಾಚರಣೆ ಹೆಸರಿನಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು ದಾಖಲೆಗಳಲ್ಲಿರುವ ಭೂಮಿಯನ್ನು ರೈತರಿಗೆ ಹಾಗೂ ಕಂದಾಯ ಇಲಾಖೆಗೆ ನೀಡಬೇಕು ಭೂಮಾಫಿಯಾಗಳಿಗೆ ಅವಕಾಶ ಕಲ್ಪಿಸುವ ಬದಲು ಸಣ್ಣ ರೈತರ ಹಕ್ಕುಗಳನ್ನು ರಕ್ಷಿಸಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ಜೆಸಿಬಿ ಬಳಸಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಒಂದು ಎಕರೆ ಒತ್ತುವರಿ ತೆರವಿಗೆ ಸುಮಾರು ನಲವತ್ತು ಸಾವಿರ ವೆಚ್ಚ ತೋರಿಸಿ, ೨,೪೫೦ ಎಕರೆ ಪ್ರದೇಶ ತೆರವುಗೊಳಿಸಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ತೆರವುಗೊಳಿಸಿದ ಪ್ರದೇಶದಲ್ಲಿ ಗಿಡ ನೆಟ್ಟಿರುವ ಯಾವುದೇ ಸ್ಪಷ್ಟ ಉದಾಹರಣೆ ಇಲ್ಲ ಎಂದು ಆರೋಪಿಸಿದರು.

ಸುಮಾರು ೧೯೨೪ರಲ್ಲಿ ಅರಣ್ಯ ಪ್ರದೇಶವಾಗಿ ಪರಿವರ್ತನೆ ಆಗದ ಭೂಮಿಯನ್ನು ಕಂದಾಯ ಇಲಾಖೆಗೆ ಹಿಂದಿರುಗಿಸಬೇಕು ಎಂಬ ನಿಯಮವಿದೆ. ೧೯೩೧ರಲ್ಲಿ ಕಿರು ಅರಣ್ಯವಾಗಿ ಘೋಷಣೆಗೊಂಡು, ೧೯೪೧ರಲ್ಲಿ ಅರಣ್ಯ, ಕಂದಾಯ ಹಾಗೂ ಸೆಟ್ಲ್ಮೆಂಟ್ ಆಗಿರುವ ಬಗ್ಗೆ ಜಂಟಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೂ ಕಂದಾಯ ಇಲಾಖೆಯ ೧೮೦ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದ್ದು, ರೈತರ ಜಮೀನುಗಳನ್ನೂ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮುಂದುವರಿದಿದೆ. ರೈತರ ಹೋರಾಟದ ಬಳಿಕ ಜಂಟಿ ಸರ್ವೆಗೆ ಆದೇಶವಾಗಿತ್ತು ಅದರಂತೆ ಸರ್ವೆಯಲ್ಲಿ ೧೮೦ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟಿದೆ ನಾಲ್ಕು ತಿಂಗಳು ಕಳೆದರೂ ಭೂಮಿ ತೆರವುಗೊಳಿಸಿ ರೈತರಿಗೆ ಹಸ್ತಾಂತರಿಸುವ ಕೆಲಸ ನಡೆದಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು ೧೯೪೧ರ ದಾಖಲೆಗಳ ಆಧಾರದ ಮೇಲೆ ಸರ್ವೆ ನಡೆದಿರುವುದರಿಂದ ಜಿಲ್ಲಾಧಿಕಾರಿ ಹಾಗೂ ತಾಲೂಕು ಆಡಳಿತ ತ್ವರಿತವಾಗಿ ಕ್ರಮ ಕೈಗೊಂಡು ಭೂಮಿಯನ್ನು ರೈತರಿಗೆ ಒಪ್ಪಿಸಬೇಕು ಶ್ರೀನಿವಾಸಪುರದಲ್ಲಿ ೧೫ ವರ್ಷಗಳಷ್ಟು ಹಳೆಯ ಮಾವಿನ ಮರಗಳನ್ನು ರಾತ್ರಿ ವೇಳೆ ಕಿತ್ತು ಹಾಕಿರುವುದು ಖಂಡನೀಯ. ಹಗಲು ವೇಳೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದ್ದರೂ, ದೌರ್ಜನ್ಯದಿಂದ ನಡೆದುಕೊಂಡಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಪಾಲಿಸಿಲ್ಲ ಎಂದು ಆರೋಪಿಸಿದರು.

ಒತ್ತುವರಿ ತೆರವು ಹೆಸರಿನಲ್ಲಿ ಜೆಸಿಬಿಗಳ ಬಳಕೆಯಲ್ಲಿ ಹೆಚ್ಚುವರಿ ಬಿಲ್ ಮಾಡಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಎನ್ ಶ್ರೀರಾಮ್ ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ರೈತ ಭಟ್ರಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande