
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:
ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಕರಾವಳಿ' ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಆಯೋಜಿಸಲಾದ ಪ್ರೀಮಿಯರ್ ಶೋಗಳಿಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರೀಮಿಯರ್ ಪ್ರದರ್ಶನಗಳು ನಡೆಯುತ್ತಿವೆ. ಈಗಾಗಲೇ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಕಥೆ, ಭಾವನಾತ್ಮಕ ನಿರೂಪಣೆ ಹಾಗೂ ಕಲಾವಿದರ ಅಭಿನಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಮಂಗಳೂರಿನ ಪ್ರೇಕ್ಷಕರು ಚಿತ್ರದ ಭಾವನಾತ್ಮಕ ಅಂಶಗಳಿಗೆ ಮನಸೋತರೆ, ಶಿವಮೊಗ್ಗದ ಪ್ರೇಕ್ಷಕರು ಚಿತ್ರದ ಮನರಂಜನೆ ಹಾಗೂ ನಿರೂಪಣೆಯನ್ನು ಮೆಚ್ಚಿದ್ದಾರೆ. ವಿಶೇಷವಾಗಿ ಮಹಾಬಲ ಮತ್ತು ಮಹಾವೀರ ಪಾತ್ರಗಳು ಸಿನಿಪ್ರೇಮಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಗುರುದತ್ ಗಾಣಿಗ ಅವರ ನಿರ್ದೇಶನ, ಕಥಾ ನಿರೂಪಣೆ ಹಾಗೂ ಕಲಾವಿದರ ಅಭಿನಯ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೀಮಿಯರ್ ಶೋಗಳ ಯಶಸ್ಸಿನಿಂದ ಚಿತ್ರತಂಡವೂ ಭಾವುಕರಾಗಿ, ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಚಿತ್ರಕ್ಕೆ ಉತ್ತಮ ಆರಂಭದ ನಿರೀಕ್ಷೆಯಲ್ಲಿದೆ.
ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರವನ್ನು ವಿಕೆ ಫಿಲ್ಮ್ ಅಸೋಸಿಯೇಷನ್ ಮತ್ತು ಗಾಣಿಗ ಫಿಲ್ಮ್ಸ್ ನಿರ್ಮಿಸಿವೆ. ಚಿತ್ರದಲ್ಲಿ ಸಂಪದಾ, ಸುಷ್ಮಿತಾ ನಾಯಕಿಯರಾಗಿ ನಟಿಸಿದ್ದು, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.