
ಗದಗ, 21 ಜುಲೈ (ಹಿ.ಸ.)
ಆ್ಯಂಕರ್:- ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾವಲಂಬನೆಗೆ ತೆರಿಗೆ ವಸೂಲಾತಿ ಹೆಚ್ಚಳ ಅತ್ಯಗತ್ಯವಾಗಿದ್ದು, ಕಡಿಮೆ ವಸೂಲಾತಿ ಮಾಡುವ ಕರವಸೂಲಿಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕರವಸೂಲಿಗಾರರು ಹಾಗೂ ವಾಟರ್ಮನ್ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಪಾವತಿಸದವರ ಪಟ್ಟಿಯನ್ನು ಸಿದ್ಧಪಡಿಸಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಮುಂಚಿತವಾಗಿ ಮಾಹಿತಿ ನೀಡಬೇಕು. ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ತೆರಳುವ ಮುನ್ನವೇ ಮನೆಗಳಿಗೆ ಭೇಟಿ ನೀಡಿ ತೆರಿಗೆ ವಸೂಲಿ ಮಾಡುವಂತೆ ಸೂಚಿಸಿದರು.
ವಸೂಲಾದ ತೆರಿಗೆ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಗ್ರಾಮ ಪಂಚಾಯಿತಿಗಳು ಉತ್ತಮ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸಿದಾಗ ಜನರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುತ್ತಾರೆ. ಆದರೆ ಕಡಿಮೆ ತೆರಿಗೆ ವಸೂಲಾತಿಗೆ ಕರವಸೂಲಿಗಾರರನ್ನೇ ಹೊಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಡಿಮೆ ತೆರಿಗೆ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರನ್ನು ಪ್ರಶ್ನಿಸಿದ ಅವರು, ವಸೂಲಾತಿ ಕುಂಠಿತವಾಗಲು ಕಾರಣವೇನು ಹಾಗೂ ಈ ಬಗ್ಗೆ ಪಿಡಿಒಗಳ ಗಮನಕ್ಕೆ ತಂದಿದ್ದೀರಾ ಎಂದು ವಿಚಾರಿಸಿದರು. ಮುಂದೆಯೂ ಇದೇ ಸ್ಥಿತಿ ಮುಂದುವರಿದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.
ಕುಡಿಯುವ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ ಬೇಡ
ವಾಟರ್ಮನ್ಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಧರ್ ಚಿನಗುಂಡಿ, ವಾಡಿಕೆಗಿಂತ ಕಡಿಮೆ ಮಳೆ ಆಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನೀರಿನ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿ, ನೀರು ಪೋಲಾಗದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾದ ಕೂಡಲೇ ಸಂಬಂಧಿತ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಕಚೇರಿಯ ಗಮನಕ್ಕೆ ತಂದು ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಉತ್ತಮ ಸಾಧಕರಿಗೆ ಸನ್ಮಾನ
ಸಭೆಯಲ್ಲಿ ಜೂನ್ ತಿಂಗಳಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ಕೊಣ್ಣೂರು, ಹುಣಶಿಕಟ್ಟಿ, ಶಿರೋಳ, ಹಾಗೂ ವಾಸನ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರನ್ನು ತಾಲೂಕು ಪಂಚಾಯಿತಿ ವತಿಯಿಂದ ‘ಜನಾಭಿಪ್ರಾಯ ಚಪ್ಪಾಳೆ’ ಕಾರ್ಯಕ್ರಮದಡಿ ಶಾಲು ಹೊದಿಸಿ, ಮಾಲೆ ಹಾಕಿ ಸಭೆಯಲ್ಲಿದ್ದವರ ಮೂಲಕ ಚೆಪ್ಪಾಳೆ ತಟ್ಟಿಸಿ ಸನ್ಮಾನಿಸಲಾಯಿತು.
ಮುಂದಿನ ತಿಂಗಳುಗಳಲ್ಲಿಯೂ ಉತ್ತಮ ತೆರಿಗೆ ವಸೂಲಾತಿ ಸಾಧಿಸುವ ಕರವಸೂಲಿಗಾರರನ್ನು ಇದೇ ರೀತಿಯಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗುವುದು ಎಂದು ಇಒ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಮಹಾಂತೇಶ್ ನಿಟ್ಟಾಲಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ ಹಾಗೂ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಕರವಸೂಲಿಗಾರರು ಮತ್ತು ವಾಟರ್ಮನ್ಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP