
ಗದಗ, 21 ಜುಲೈ (ಹಿ.ಸ.)
ಆ್ಯಂಕರ್:- ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸಲು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ'ಗಳನ್ನಾಗಿ ಪರಿವರ್ತಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಅವರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮುದಾಯ ಉದ್ಯಮಿಗಳ ಮತ್ತು ಕಾರ್ಪೊರೇಟರ್ ಸಾಮಾಜಿಕ ಹೊಣೆಗಾರಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಎಲ್ಕೆಜಿಯಿಂದ 12ನೇ ತರಗತಿ (ದ್ವಿತೀಯ ಪಿಯುಸಿ) ವರೆಗೆ ಒಂದೇ ಸೂರಿನಡಿ ಉಚಿತ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಜಿಲ್ಲೆಯ ಕೆಪಿಎಸ್ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 80 ರಿಂದ 90 ಕ್ಕೂ ಹೆಚ್ಚು ಉತ್ತಮ ಫಲಿತಾಂಶ ದಾಖಲಾಗುತ್ತಿದೆ ಎಂದರು.
ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಲಾಭಾಂಶದ ಶೇ. 2 ರಷ್ಟು ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುವುದು ಕಡ್ಡಾಯವಿದ್ದು, ಈ ನಿಧಿಯನ್ನು ಶಿಕ್ಷಣ ಇಲಾಖೆಯ ಸುಧಾರಣೆಗೆ ಬಳಸಿಕೊಳ್ಳಲು ಉದ್ಯಮಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 20 ಕೆಪಿಎಸ್ ಶಾಲೆಗಳು ಕಾರ್ಯಾಚರಿಸುತ್ತಿದ್ದು, ಉಳಿದ ಸುಮಾರು 700 ಕ್ಕೂ ಹೆಚ್ಚು ಶಾಲೆಗಳನ್ನು ಸಂಯೋಜಿಸಿ, ಹೊಸದಾಗಿ 37 ಹೆಚ್ಚುವರಿ ಕೆಪಿಎಸ್ ಶಾಲೆಗಳನ್ನು ಕ್ಲಸ್ಟರ್ ಮಾದರಿಯಲ್ಲಿ (ಸುತ್ತಮುತ್ತಲಿನ 4-5 ಶಾಲೆಗಳನ್ನು ಒಟ್ಟುಗೂಡಿಸಿ) ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕೆ.ಪಿ.ಎಸ್ ಶಾಲೆಗಳನ್ನು ಆಯ್ಕೆ ಮಾಡುವದರಿಂದ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶ, ದ್ವಿಬಾಷಾ ಮಾಧ್ಯಮದ ಸೌಲಭ್ಯ, ಹಣದ ಉಳಿತಾಯ (ಶೂನ್ಯ ವೆಚ್ಚ ). 14 ವರ್ಷಗಳ ನಿರಂತರ ಶಿಕ್ಷಣ (ಎಲ್.ಕೆ.ಜಿ ಟು ಪಿಯು) ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದರು.
ಖಾಸಗಿ ಶಾಲೆಗಳಲ್ಲಿ ವರ್ಷಕ್ಕೆ 10000 ದಿಂದ ₹50,000 ಕ್ಕೂ ಹೆಚ್ಚು ವೆಚ್ಚ ಮಾಡಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಈ ಯೋಜನೆಯ ಆಶಯವಾಗಿದೆ ಎಂದರು.
ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣವೇ ನಾವು ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಶಾಲಾ ಕಟ್ಟಡ, ಸ್ಮಾರ್ಟ್ ತರಗತಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ವಾಹನ ಸಾರಿಗೆ ವ್ಯವಸ್ಥೆ ಹಾಗೂ ಶಿಕ್ಷಕರ ನೇಮಕಕ್ಕೆ ಸಿಎಸ್ಆರ್ ಮೂಲಕ ನೇರವಾಗಿ ನೆರವು ನೀಡಬಹುದು ಒಂದು ದೊಡ್ಡ ದೇವಸ್ಥಾನ ಕಟ್ಟೋಕ್ಕಿಂತ 10 ಕೆಪಿಎಸ್ ಶಾಲೆಗಳನ್ನು ಕಟ್ಟಬೇಕು ಅಂದಾಗ ಮಾತ್ರ ನಮ್ಮ ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಲಿಕೆ ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾರ್ಪೊರೇಟ್ ಸಂಸ್ಥೆಗಳು ಕೇವಲ ಸಣ್ಣಪುಟ್ಟ ಕೆಲಸಗಳಿಗೆ ಅಥವಾ ತಾತ್ಕಾಲಿಕ ನೆರವಿಗೆ ಸೀಮಿತವಾಗದೆ, ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ದತ್ತು ಅಥವಾ ಸಮಗ್ರ ಅಭಿವೃದ್ಧಿಗೆ ಮುಂದೆ ಬರಬೇಕು.
ಖಾಸಗಿ ಕಂಪನಿಗಳು ಹಾಗೂ ಕಾರ್ಪೊರೇಟ್ ರಂಗದವರು ತಮ್ಮ ಸಿಎಸ್ಆರ್ ನಿಧಿಯನ್ನು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಬಳಸಬೇಕು. ಕೆಪಿಎಸ್ ಶಾಲೆಗಳಲ್ಲಿ ಬಸ್ ಸೌಕರ್ಯ ಒದಗಿಸುವುದು, ಶಿಕ್ಷಕರ ವೇತನಕ್ಕೆ ಬೆಂಬಲ ನೀಡುವುದು, ನೈರ್ಮಲ್ಯ ಹಾಗೂ ಶೌಚಾಲಯಗಳ ನಿರ್ಮಾಣ, ಸ್ಮಾರ್ಟ್ ತರಗತಿಗಳನ್ನು ಸಜ್ಜುಗೊಳಿಸುವುದು ಮುಂತಾದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು. ಕಂಪನಿಗಳ ಉನ್ನತ ನಿರ್ವಹಣಾಧಿಕಾರಿಗಳೊಂದಿಗೆ ನೇರವಾಗಿ ಚರ್ಚಿಸಿ, ಜಿಲ್ಲೆಯ ಶಾಲೆಗಳನ್ನು ಮಾದರಿ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲು ಎಲ್ಲಾ ಸಂಸ್ಥೆಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಉದ್ಯಮಿಗಳಿಗೆ ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ ಉತ್ತಮ ಶೈಕ್ಷಣಿಕ ಫಲಿತಾಂಶ: ಕೆಪಿಎಸ್ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶವು ಸಾಮಾನ್ಯ ಸರ್ಕಾರಿ ಶಾಲೆಗಳಿಗಿಂತ ಗಣನೀಯವಾಗಿ ಉತ್ತಮವಾಗಿದ್ದು (ಶೇ. 80 ರಿಂದ 90 ಕ್ಕೂ ಹೆಚ್ಚು), ವಿದ್ಯಾರ್ಥಿಗಳ ಶೈಕ್ಷಣಿಕ ಸಾತ್ಯತೆ ಕಾಯ್ದುಕೊಳ್ಳಲು ಸಹಾಯವಾಗಿದೆ ಎಂದರು.
*'ನಮ್ಮ ಶಾಲೆ ನನ್ನ ಕೊಡುಗೆ' ಪೋರ್ಟಲ್:*
ಆಸಕ್ತ ಸಂಸ್ಥೆಗಳು ಹಾಗೂ ಉದ್ಯಮಿಗಳು ನಮ್ಮ ಶಾಲೆ ನನ್ನ ಕೊಡುಗೆ ಆನ್ಲೈನ್ ವೆಬ್ಸೈಟ್ ಮೂಲಕ ಅಥವಾ ಜಿಲ್ಲಾ ಸಿಎಸ್ಆರ್ ಕೋಶದ ಮೂಲಕ ನೇರವಾಗಿ ಪ್ರಸ್ತಾಪಗಳನ್ನು ಸಲ್ಲಿಸಿ ಶಾಲೆಗಳ ದತ್ತು ಪಡೆಯಬಹುದು ಎಂದು ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮೂಲಸೌಕರ್ಯ ಹಾಗೂ ಅಗತ್ಯತೆಗಳ ಮಾಹಿತಿಯನ್ನು ಸಿದ್ಧಪಡಿಸಲಾಗಿದೆ. ಸುಮಾರು 37 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಿದ್ದು, ಪ್ರತಿಯೊಂದು ಶಾಲೆಯ ವ್ಯಾಪ್ತಿ, ಅಗತ್ಯವಿರುವ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ರೂಮ್ ಹಾಗೂ ಇತರ ಸೌಲಭ್ಯಗಳ ನಿಖರ ಪಟ್ಟಿಯನ್ನು ತಯಾರಿಸಿ ಆಯಾ ಭಾಗದ ಕಂಪನಿಗಳಿಗೆ ಇಮೇಲ್ ಮೂಲಕ ಕಳುಹಿಸಲಾಗುವುದು. ಪ್ರತಿಯೊಂದು ಶಾಲೆಯ ಅಗತ್ಯತೆಗೆ ತಕ್ಕಂತೆ ಸಿಎಸ್ಆರ್ ನೆರವು ಪಡೆಯಲು ಯೋಜನೆ ರೂಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಎಂದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಾ. ಶರಣು ಗೊಗೇರಿ, ಎಲ್ಲಾ ಸಮುದಾಯ ಉದ್ಯಮಿಗಳು, ಕಾರ್ಪೊರೇಟ ಕಂಪನಿಯ ಅಧಿಕಾರಿಗಳು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP