
ಬೆಂಗಳೂರು, 17 ಜುಲೈ (ಹಿ.ಸ.):
ಆ್ಯಂಕರ್:
ಕಾನೂನು ವಿದ್ಯಾರ್ಥಿನಿ ಅಮೃತಾ ಹತ್ಯೆ ಹಾಗೂ ಬಂಟ್ವಾಳದಲ್ಲಿ ಲಾವಣ್ಯ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲೇ ಹಗಲು ಹೊತ್ತಿನಲ್ಲಿ ಇಂತಹ ಭೀಕರ ಕೃತ್ಯಗಳು ನಡೆಯುತ್ತಿರುವುದು ಅಪರಾಧಿಗಳಿಗೆ ಪೊಲೀಸರ ಹಾಗೂ ಕಾನೂನಿನ ಭಯ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಕನಿಷ್ಠ ಸುರಕ್ಷತೆಯೂ ಇಲ್ಲದಂತಹ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೆಲಸ ಅಥವಾ ವಿದ್ಯಾಭ್ಯಾಸಕ್ಕಾಗಿ ಹೊರಹೋಗುವ ಮಹಿಳೆಯರು ಸುರಕ್ಷಿತವಾಗಿ ಮನೆಗೆ ಮರಳುವ ಭರವಸೆಯನ್ನು ಸರ್ಕಾರ ಕಳೆಸಿದೆ ಎಂದು ಟೀಕಿಸಿದ್ದಾರೆ.
ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಯಾವುದೇ ವಿನಾಯಿತಿ ನೀಡದೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆ ಆಗುವಂತೆ ಕ್ರಮವಹಿಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.