
ಬಾಗಲಕೋಟೆ, 17 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡುವ ಉದ್ದೇಶದಿಂದ ಬುದ್ಧೀಷ್ಠ ಮಾರ್ಷಲ್ ಆರ್ಟ್ಸ್ & ಸ್ಕಿಲ್ ಯೂನಿಯನ್ನ ಕರಾಟೆ ವಿದ್ಯಾರ್ಥಿಗಳು ಇಂದು ಬೆಳಗಿನ ಜಾವ ವಿಶಿಷ್ಟ ಸ್ವಚ್ಛತಾ ಅಭಿಯಾನ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ನಗರದ ವಿವಿಧ ರಸ್ತೆ, ವೃತ್ತಗಳು, ವಿದ್ಯುತ್ ಕಂಬಗಳು, ಗೋಡೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಅಂಟಿಸಲಾಗಿದ್ದ ಜಾಹೀರಾತು ಬಿತ್ತಿಪತ್ರಗಳನ್ನು ತೆರವುಗೊಳಿಸುವ ಮೂಲಕ ನಗರವನ್ನು ಸ್ವಚ್ಛಗೊಳಿಸಿದರು.
ಪ್ರತಿನಿತ್ಯ ಕರಾಟೆ ತರಬೇತಿಯೊಂದಿಗೆ ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ಆತ್ಮರಕ್ಷಣೆಯ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಗಮನ ಸೆಳೆಯಿತು.
ನಗರದ ಸೌಂದರ್ಯವನ್ನು ಹಾಳು ಮಾಡುವ ಅಕ್ರಮ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಜವಾಬ್ದಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂದೇಶವನ್ನು ವಿದ್ಯಾರ್ಥಿಗಳು ನೀಡಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ಬಾಗಲಕೋಟೆ ನಗರಸಭೆಯ ಸಿಬ್ಬಂದಿಯೂ ಕರಾಟೆ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ವಿದ್ಯಾರ್ಥಿಗಳೊಂದಿಗೆ ಕೈಜೋಡಿಸಿ ನಗರದ ಪ್ರಮುಖ ಪ್ರದೇಶಗಳಲ್ಲಿ ಅಂಟಿಸಲಾಗಿದ್ದ ಜಾಹೀರಾತು ಪತ್ರಿಕೆಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ಭಾಗಿಯಾದರು.
ನಗರಸಭೆ ಸಿಬ್ಬಂದಿ ಮತ್ತು ಕರಾಟೆ ವಿದ್ಯಾರ್ಥಿಗಳ ಈ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರತಿನಿಧಿಗಳು, ಸ್ವಚ್ಛ ನಗರ ನಿರ್ಮಾಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಗೋಡೆಗಳು, ವಿದ್ಯುತ್ ಕಂಬಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತು ಅಂಟಿಸುವುದನ್ನು ತಪ್ಪಿಸಬೇಕು.
ನಗರದ ಸೌಂದರ್ಯ ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು, ಎಂದು ಮನವಿ ಮಾಡಿದರು. ಬೆಳಗಿನ ಜಾವ ನಡೆದ ಈ ಅಭಿಯಾನದಲ್ಲಿ ಕರಾಟೆ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಾರ್ವಜನಿಕರಿಗೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ನಗರದ ಸ್ವಚ್ಛತೆಗಾಗಿ ಯುವಜನರು ಕೈಗೊಂಡ ಈ ಸಮಾಜಮುಖಿ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬ ಆಶಯ ಸಾರ್ವಜನಿಕರಿಂದ ವ್ಯಕ್ತವಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande