
ಬಾಗಲಕೋಟೆ, 17 ಜುಲೈ (ಹಿ.ಸ.):
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ್ ವಿರುದ್ಧ ಅಹಿಂದ ಮುಖಂಡ ಯಲ್ಲಪ್ಪ ಹೆಗಡೆ ತೀವ್ರ ವಾಗ್ದಾಳಿ ನಡೆಸಿದ್ದು, ಸಾಮಾಜಿಕ ನ್ಯಾಯ, ಶಿಕ್ಷಣ ಹಾಗೂ ಬಡವರ ಹಿತಾಸಕ್ತಿಗಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತುವ ಬದಲು ಮಂತ್ರಿ ಸ್ಥಾನ ಪಡೆಯುವ ಉದ್ದೇಶದಿಂದ ದೆಹಲಿಯಲ್ಲಿ ರಾಜಕೀಯ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಾಗಲಕೋಟೆ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೀಳಗಿ ಕ್ಷೇತ್ರದ ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿಂದ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಅಭಿವೃದ್ಧಿ, ರೈತರ ಸಂಕಷ್ಟ, ಶಿಕ್ಷಣ, ಉದ್ಯೋಗ, ಕುಡಿಯುವ ನೀರು, ರಸ್ತೆ ಹಾಗೂ ಬಡವರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಪರಿಣಾಮಕಾರಿಯಾಗಿ ಮಾತನಾಡದೆ ಜನರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಟೀಕಿಸಿದರು.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಮಾಡುವವರು ನಿಜವಾಗಿಯೂ ಸಮಾಜದ ಪರ ಕಾಳಜಿ ಹೊಂದಿದ್ದರೆ, ಸದನದಲ್ಲಿ ಜನರ ಧ್ವನಿಯಾಗಬೇಕು. ಆದರೆ ಅಧಿಕಾರ ಮತ್ತು ಮಂತ್ರಿ ಸ್ಥಾನಕ್ಕಾಗಿ ರಾಜಕೀಯ ಮಾಡುವುದು ಜನರ ನಿರೀಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಯಲ್ಲಪ್ಪ ಹೆಗಡೆ ಹೇಳಿದರು.
ಬೀಳಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಯುವಕರಿಗೆ ಉದ್ಯೋಗ, ರೈತರಿಗೆ ಸಮರ್ಪಕ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕ್ಷೇತ್ರದ ಜನರ ಪರವಾಗಿ ಶಾಸಕರು ಸದನದಲ್ಲಿ ಪರಿಣಾಮಕಾರಿಯಾಗಿ ಮಾತನಾಡಿ ಸರ್ಕಾರದ ಮೇಲೆ ಒತ್ತಡ ತರಬೇಕಿತ್ತು. ಆದರೆ ಅದನ್ನು ಬಿಟ್ಟು ವೈಯಕ್ತಿಕ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಯಾವುದೇ ಬೆಳವಣಿಗೆಯ ವಿರುದ್ಧ ಅಹಿಂದ ಸಂಘಟನೆ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande