
ಕೋಲಾರ, ೧೫ ಜುಲೈ (ಹಿ.ಸ):
ಆ್ಯಂಕರ್ : ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದ್ದು, ಜಾಗತಿಕ ಉತ್ಪಾದನೆಯಲ್ಲಿ ಸುಮಾರು ಶೇಕಡಾ ೨೨ರಷ್ಟು ಕೊಡುಗೆ ನೀಡುತ್ತಿದ್ದು, ಈ ಸಾಧನೆಯಲ್ಲಿ ಮಹಿಳೆಯರ ಪಾತ್ರ ಅತಿ ಪ್ರಮುಖವಾದುದು ಎಂದು ಅರಾಭಿಕೊತ್ತನೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಿತಿನ್ ತಿಳಿಸಿದರು.
ವಿರ್ ಬ್ಯಾಕ್ ಕಂಪನಿ ಮತ್ತು ಪಶುವೈದ್ಯಕೀಯ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಹಾಲು ದಿನದ ಅಂಗವಾಗಿ ಹಾಲಿನ ಮಹತ್ವದ ಕುರಿತು ಮಕ್ಕಳಿಗೆ ಪಿಪಿಟಿ ಪ್ರದರ್ಶನ ನೀಡಿ, ಮನೆಯಲ್ಲಿ ಹಸು ಸಾಕಾಣೆ ಮಾಡುತ್ತಿರುವ ಕುಟುಂಬದ ಮಕ್ಕಳಿಗೆ ವಿರ್ಬ್ಯಾಕ್ ಕಂಪನಿಯಿಂದ ಉಚಿತವಾಗಿ ಕ್ಯಾಲ್ಸಿಯಂ ವಿಟವಿನ್ ವಿತರಿಸಿ ಮಾತನಾಡಿದರು.
ಹಾಲಿನ ಉತ್ಪಾದನೆಯಲ್ಲಿನ ಈ ಸಾಧನೆಗೆ ಕಾರಣ ತಿಳಿಸಿದ ಅವರು, ೧೯೭೦ಕ್ಕಿಂತ ಮುಂಚೆ ಭಾರತದಲ್ಲಿ ಹಾಲಿನ ವಕೊರೆತೆ ಇದ್ದು, ಆಮದು ಮಾಡಿಕೊಳ್ಳಬೇಕಾಗಿತ್ತು ಆದರೆ ೧೯೭೦ ರಲ್ಲಿ ರಾಷ್ಟಿಯ ಡೈರಿ ಅಭಿವೃದ್ದಿ ನಿಮ ಎನ್ಡಿಡಿಪಿ ಆರಂಭಿಸಿದ ನಂತರ ಮತ್ತು ಕ್ಷೀರಕ್ರಾಂತಿಯ ಹರಿಹಾರ ವರ್ಗೀಸ್ ಕುರಿಯನ್ ಅವರ ಪರಿಶ್ರಮದಿಂದಾಗಿ ಭಾರತ ಇಂದು ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ದೇಶವಾಗಲು ಸಾಧ್ಯವಾಯಿತು. ಪ್ರಸ್ತುತ ಸಾಲಿನ ವಿಶ್ವ ಹಾಲು ದಿನದ ಧ್ಯೇಯ `ಮಹಿಳಾ ರೈತರನ್ನು ಉತ್ತೇಜಿಸುವುದು' ಎಂಬುದಾಗಿದ್ದು, ಈ ಧ್ಯೇಯವಾಕ್ಯದೊಂದಿಗೆ ವಿಶ್ವಾದ್ಯಂತ ಹೈನುಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದರು.
ಮಹಿಳೆಯರು ಹೈನುಗಾರಿಕೆ, ಪಶುಪಾಲನೆ, ಹಾಲು ಉತ್ಪಾದನೆ, ಗ್ರಾಮೀಣ ಉದ್ಯಮಶೀಲತೆ ಮತ್ತು ಕುಟುಂಬ ಪೋಷಣೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಈ ಧ್ಯೇಯವಾಕ್ಯದೊಂದಿಗೆ ನಡೆಸುತ್ತಿರುವ ಅಭಿಯಾನವು ಸುಸ್ಥಿರ ಕೃಷಿ, ಆರ್ಥಿಕ ಬೆಳವಣಿಗೆ ಮತ್ತು ಆಹಾರ ವ್ಯವಸ್ಥೆಗಳಿಗೆ ಅವರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.ಇಂದು ವಿಶ್ವದ ಅತಿ ಪ್ರಮುಖ ಆಹಾರವಾಗಿರುವ ಹಾಲಿನ ಪ್ರಾಮುಖ್ಯತೆ, ಅದರಲ್ಲಿನ ಪೌಷ್ಟಿಕಾಂಶಗಳು, ಜನಜೀವನದಲ್ಲಿ ಅದರ ಪ್ರಾಮುಖ್ಯತೆ ಅರಿತು ನಾವಿಂದು ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ನಗರದ ಐಎಹೆಚ್ ಮತ್ತು ವಿಬಿ ಪ್ರಾಯೋಗಾಲಯದ ವೈದ್ಯ ಡಾ.ನಟರಾಜು ಮಾತನಾಡಿ, ಹಾಲಿಗೆ ಅಮೃತ ಎನ್ನುತ್ತೇವೆ, ಅದು ನಿಜಕ್ಕೂ ಸತ್ಯ ಎಂದ ಅವರು, ನಾವಿಂದು ಹಾಲಿಲ್ಲದೇ ಬದುಕಬಲ್ಲೆವಾ ಎಂಬುದನ್ನು ಆಲೋಚಿಸಿದಾಗ ಅದರ ಮಹತ್ವ ತಿಳಿಯುತ್ತದೆ, ಅದರಲ್ಲೂ ಮಕ್ಕಳಿರುವ ಮನೆಯಲ್ಲಿ ಹಾಲೇ ಬದುಕಿನ ಆಹಾರವಾಗಿದೆ.ಹಾಲಿನ ಪ್ರಾಮುಖ್ಯತೆ ಮತ್ತು ಡೈರಿ ಉದ್ಯಮದ ಆರ್ಥಿಕ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ೨೦೦೧ರಿಂದ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ತಿಳಿಸಿ, ಮಕ್ಕಳು ಕ್ಷೀರಭಾಗ್ಯದಡಿ ನೀಡುತ್ತಿರುವ ಹಾಲನ್ನು ಸಮರ್ಪವಾಗಿ ಸೇವಿಸಿ ರಕ್ತಹೀನತೆಯಿಂದ ಪಾರಾಗಿ ಎಂದರು.
ವಿರ್ಬ್ಯಾಕ್ ಕಂಪನಿ ಅಧಿಕಾರಿ ಮೋನಿಷ್ ಮಾತನಾಡಿ, ಮಾನವನ ಆರೋಗ್ಯಕ್ಕೆ ಹಾಲಿನಲ್ಲಿರುವ ಪೋಷಕಾಂಶಗಳ ಪ್ರಯೋಜನವನ್ನು ತಿಳಿಸುವುದು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಈ ಅರಿವು ನೀಡುವ ಕೆಲಸ ಮಾಡುತ್ತಿದ್ದೇವೆ.ವಿಶ್ವ ಹಾಲು ದಿನವನ್ನು ಪ್ರಪಂಚದಾದ್ಯ0ತ ವಿವಿಧ ದೇಶಗಳಲ್ಲಿ ಜಾನುವಾರು ಪ್ರದರ್ಶನಗಳು, ವಿಚಾರಗೋಷ್ಠಿಗಳು ಹಾಗೂ ಡೈರಿ ಉತ್ಪನ್ನಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಮಡೆಸುವ ಮೂಲಕ ಆಚರಿಸುತ್ತಿದ್ದು, ನಾವು ಶಾಲಾ ಮಕ್ಕಳಿಗೆ ಹಾಲಿನ ಮಹತ್ವದ ಕುರಿತು ಅರಿವು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹಸು ಸಾಕಾಣೆ ಮಾಡುತ್ತಿರುವ ರೈತರ ಮಕ್ಕಳಿಗೆ ವಿರ್ ಬ್ಯಾಕ್ ಕಂಪನಿಯಿಂದ ಉಚಿತವಾಗಿ ಹಸುವಿಗೆ ನೀಡುವ ಕ್ಯಾಲ್ಸಿಯಂ ಪೋಷಕಾಂಶವನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ವಹಿಸಿದ್ದು, ಶಿಕ್ಷಕರಾದ ಸಿದ್ದೇಶ್ವರಿ, ಭವಾನಿ,ಶ್ವೇತಾ,ಸುಗುಣ, ವೆಂಕಟರೆಡ್ಡಿ,ಶ್ರೀನಿವಾಸಲು, ರಮಾದೇವಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್