ಕೋಲಾರ:ಅಪಾಯದ ಅಂಚಿನಲ್ಲಿದ್ದ ವಿದ್ಯುತ್ ಕಂಬ ದುರಸ್ತಿಪಡಿಸಿದ ನಗರಸಭೆ
ರಸ್ತೆ ಡಿವೈಡರ್ ಮಧ್ಯೆ ಉರುಳಿದ್ದ ವಿದ್ಯುತ್ ಕಂಬವನ್ನು ದುರಸ್ತಿಪಡಿಸಿದ ನಗರಸಭೆ
ಕೋಲಾರ ನಗರದ ಬಸ್ ನಿಲ್ದಾಣದ ಬಳಿ ರಸ್ತೆ ಡಿವೈಡರ್ ಮಧ್ಯ ಇದ್ದ ವಿದ್ಯುತ್ ಕಂಬ ನೆಲಕ್ಕುರುಳುವ ಅಪಾಯದ ಪರಿಸ್ಥಿತಿ ಇದ್ದು, ಕೋಲಾರ ನಗರಸಭಾ ಪೌರಾಯುಕ್ತರು ಸ್ಥಳಕ್ಕೆ ಧಾವಿಸಿ ದುರಸ್ತಿಪಡಿಸಿದರು.


ಕೋಲಾರ, ೧೪ ಜುಲೈ (ಹಿ.ಸ):

ಆ್ಯಂಕರ್ : ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ಡಿವೈಡರ್ ಬಳಿ ಇದ್ದ ವಿದ್ಯುತ್ ಕಂಬವು ಅರ್ಧದಷ್ಟು ಬಾಗಿಕೊಂಡು ಯಾವುದೇ ಕ್ಷಣದಲ್ಲಿ ನೆಲಕ್ಕುರುಳುವ ಅಪಾಯದ ಸ್ಥಿತಿಯಲ್ಲಿತ್ತು. ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಹಿನ್ನೆಲೆಯಲ್ಲಿ, ಕೋಲಾರ ನಗರಸಭೆ ಪೌರಾಯುಕ್ತರಾದ ವೆಂಕಟೇಶ್ ನಾಗನೂರ್ ಅವರು ಮಂಗಳವಾರ ಮಧ್ಯರಾತ್ರಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಾಯುಕ್ತರ ಸೂಚನೆಯಂತೆ ಹಿರಿಯ ಆರೋಗ್ಯ ನಿರೀಕ್ಷಕರಾದ ಸಂಜಯ್ ವೀರ್ ಅವರು ಸಿಬ್ಬಂದಿಯೊಂದಿಗೆ ಸ್ಥಳದಲ್ಲೇ ಹಾಜರಿದ್ದು, ಅಪಾಯಕಾರಿಯಾಗಿದ್ದ ವಿದ್ಯುತ್ ಕಂಬವನ್ನು ಸುರಕ್ಷಿತವಾಗಿ ದುರಸ್ತಿ ಮಾಡಿಸಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದರು.

ಹಗಲಿನ ವೇಳೆಯಲ್ಲಿ ಕಾಮಗಾರಿ ನಡೆಸಿದರೆ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರದ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಧ್ಯರಾತ್ರಿಯಲ್ಲೇ ಕಾಮಗಾರಿ ಪೂರ್ಣಗೊಳಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದುರಸ್ತಿ ಕಾರ್ಯದ ವೇಳೆ ವಾರ್ಡ್ ಸಂಖ್ಯೆ ೨೯, ೩೦, ೩೧, ೩೨, ೩೩, ೩೪ ಹಾಗೂ ೩೫ರ ಮೇಲ್ವಿಚಾರಕರಾದ ಪರಮೇಶ್ವರ್ ಅವರು ಸ್ಥಳದಲ್ಲಿದ್ದು ಕಾಮಗಾರಿಯ ಮೇಲ್ವಿಚಾರಣೆ ವಹಿಸಿದ್ದರು. ಸಮಾಜ ಸೇವಕರು ಹಾಗೂ ಯುವ ಮುಖಂಡರು ಸಂದೇಶ್ ಅಲಿಯಾಸ್ ಪಪ್ಪಿ ಮತ್ತು ಸಮಾಜ ಸೇವಕರೂ ಹಾಗೂ ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾದ ಮುಸ್ತಫಾ ಪಾಷಾ ಅವರು ಸಹ ಸ್ಥಳದಲ್ಲಿದ್ದು ಅಗತ್ಯ ಸಹಕಾರ ನೀಡಿದರು.

ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ತ್ವರಿತವಾಗಿ ಕ್ರಮ ಕೈಗೊಂಡ ಕೋಲಾರ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್ ಹಾಗೂ ಅಧಿಕಾರಿಗಳ ಕಾರ್ಯವನ್ನು ಸ್ಥಳೀಯ ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande