ಬಿಡದಿ ಟೌನ್ಶಿಪ್ ಸಮಿತಿ ರಚನೆ ಕಾಂಗ್ರೆಸ್ನ ಹೊಸ ನಾಟಕ: ಆರ್. ಅಶೋಕ
ಬೆಂಗಳೂರು, 15 ಜುಲೈ (ಹಿ.ಸ.): ಆ್ಯಂಕರ್:ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಕೈಬಿಡದೆ ಸಮಿತಿ ರಚಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಹೊಸ ನಾಟಕ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಪೊಲೀಸ್
ಅಶೋಕ


ಬೆಂಗಳೂರು, 15 ಜುಲೈ (ಹಿ.ಸ.):

ಆ್ಯಂಕರ್:ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಕೈಬಿಡದೆ ಸಮಿತಿ ರಚಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಹೊಸ ನಾಟಕ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಪೊಲೀಸ್ ಬಲ ಬಳಸಿದ್ದು, ಈಗ ಅಧಿವೇಶನದ ಒತ್ತಡ ತಪ್ಪಿಸಿಕೊಳ್ಳಲು ಸಮಿತಿ ರಚಿಸಿದೆ ಎಂದು ಟೀಕಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಭೂಸ್ವಾಧೀನಕ್ಕೆ ಯಾವುದೇ ಅಂತಿಮ ಆದೇಶ ಹೊರಡಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಡದಿ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೇವಲ ಪ್ರಾಥಮಿಕ ಪ್ರಕ್ರಿಯೆ ನಡೆಸಿದ್ದು, ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ವಿಧಾನಸಭೆಯಲ್ಲೇ ಹೇಳಿದ್ದರು ಎಂದು ಅಶೋಕ ತಿಳಿಸಿದರು. ಬಳಿಕ ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಸರ್ಕಾರಗಳ ಅವಧಿಯಲ್ಲೂ ಭೂಸ್ವಾಧೀನ ನಡೆದಿಲ್ಲ ಎಂದರು.

ಡಿಎಲ್‌ಎಫ್ ಸಂಸ್ಥೆ ಠೇವಣಿ ಇಟ್ಟಿದ್ದ ಹಣವನ್ನು ಬಿಜೆಪಿ ಸರ್ಕಾರ ಹಿಂದಿರುಗಿಸಿದ್ದು, ಯೋಜನೆಯಲ್ಲಿ ಬಿಜೆಪಿಯ ಯಾವುದೇ ರಿಯಲ್ ಎಸ್ಟೇಟ್ ಆಸಕ್ತಿ ಇರಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ 2016ರಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಘೋಷಣೆ, ಪ್ರದೇಶ ಪ್ರಾಧಿಕಾರ ರಚನೆ ಹಾಗೂ ನಂತರದ ಆಡಳಿತಾತ್ಮಕ ಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅಶೋಕ, ಕಾಂಗ್ರೆಸ್ ಹಿಂದೆ ಈ ಯೋಜನೆಯನ್ನು ವಿರೋಧಿಸಿದ್ದರೂ ಈಗ ಜಾರಿಗೊಳಿಸಲು ಮುಂದಾಗಿದೆ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹಿಂದೆ ವಿಧಾನಸಭೆಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಮಾತನಾಡಿದ್ದನ್ನೂ ಅಶೋಕ ಉಲ್ಲೇಖಿಸಿದರು.

ಸಮಿತಿ ರಚನೆಯಿಂದ ಯಾವುದೇ ಪ್ರಯೋಜನವಿಲ್ಲ. ರೈತರ ಜಮೀನನ್ನು ಅವರಿಗೇ ಬಿಟ್ಟು ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ಡಿನೋಟಿಫಿಕೇಶನ್ ಬೇಡ, ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಿದರೆ ಸಾಕು ಎಂದು ಸರ್ಕಾರವನ್ನು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande