
ಗದಗ, 15 ಜುಲೈ (ಹಿ.ಸ.)
ಆ್ಯಂಕರ್:- ಮಹಾತ್ಮ ಗಾಂಧೀಜಿಯವರ “ಗ್ರಾಮಗಳ ಅಭಿವೃದ್ಧಿಯಲ್ಲೇ ದೇಶದ ಅಭಿವೃದ್ಧಿ ಅಡಗಿದೆ” ಎಂಬ ಚಿಂತನೆಗೆ ಅನುಗುಣವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ದೇಶಕ್ಕೇ ಮಾದರಿಯಾಗುವ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಕುಲಪತಿ ಡಾ. ಎಸ್.ವಿ. ನಾಡಗೌಡರ ಹೇಳಿದರು.
ಗದಗ ನಗರದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಗದಗ ಜಿಲ್ಲಾ ಘಟಕ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಪ್ರಾಚಾರ್ಯರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ, ಸ್ಥಳೀಯ ಆಡಳಿತ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಶ್ವವಿದ್ಯಾಲಯವನ್ನು ಸಮಕಾಲೀನ ಅಗತ್ಯಗಳಿಗೆ ಹೊಂದುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಮಾಜಮುಖಿ ಕೌಶಲ್ಯಗಳು, ನಾಯಕತ್ವ ಗುಣಗಳು ಮತ್ತು ಕ್ಷೇತ್ರಾಧಾರಿತ ಅನುಭವಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಗ್ರಾಮ ಪಂಚಾಯತ್ಗಳು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ಗಳೊಂದಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಸಮನ್ವಯಗೊಳಿಸಿ ಗ್ರಾಮೀಣ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಹಿಡಿಯುವ ಕಾರ್ಯಕ್ಕೆ ಉತ್ತೇಜನ ನೀಡಲಾಗುವುದು ಎಂದು ಡಾ. ನಾಡಗೌಡರ ಹೇಳಿದರು. ಗ್ರಾಮೀಣ ಆಡಳಿತ, ಕುಡಿಯುವ ನೀರು, ಸ್ವಚ್ಛತೆ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ಡಿಜಿಟಲ್ ಸೇವೆಗಳು ಮತ್ತು ಶಾಶ್ವತ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ತರಬೇತಿಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಇಲಾಖೆಗಳಲ್ಲಿ ಹಾಗೂ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುವಂತೆ ವಿಶೇಷ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು. ವಿಶ್ವವಿದ್ಯಾಲಯವು ಕೇವಲ ಪದವಿ ನೀಡುವ ಸಂಸ್ಥೆಯಾಗಿರದೆ ಗ್ರಾಮೀಣ ಭಾರತದ ಅಭಿವೃದ್ಧಿಗೆ ದಿಕ್ಕು ತೋರಿಸುವ ಜ್ಞಾನಕೇಂದ್ರವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸನ್ಮಾನ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಡಾ. ನಾಡಗೌಡರ ನೀಡಿರುವ ಸೇವೆಯನ್ನು ಸ್ಮರಿಸಿ ಗಣ್ಯರು ಅಭಿನಂದಿಸಿದರು. ಪ್ರಾಚಾರ್ಯರಾದ ಬಿ.ಜಿ. ಗಿರಿತಮ್ಮಣ್ಣವರ, ಐ.ಬಿ. ಹಾದಿಮನಿ, ಡಾ. ಬಿ.ಎಸ್. ರಾಥೋಡ್, ಎಸ್.ಬಿ. ಹಾವೇರಿ, ರವಿ ಕುಲಕರ್ಣಿ ಹಾಗೂ ಎಸ್.ಎಂ. ಗುಳಗುಳಿ, ಉಪನ್ಯಾಸಕರಾದ ಡಾ. ವೈ.ಆರ್. ಬೇಲೇರಿ, ಎಸ್.ಐ. ಮೇಟಿ, ಶ್ರೀಶೈಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP