
ಗದಗ, 15 ಜುಲೈ (ಹಿ.ಸ.)
ಆ್ಯಂಕರ್:- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ಬಿವೈ) ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಹೊಸ ನಿಯಮಗಳಿಂದ ರೈತರು ತೀವ್ರ ಗೊಂದಲಕ್ಕೆ ಸಿಲುಕಿದ್ದು, ವಿಮೆ ಕಂತು ಪಾವತಿಸಲು ನಿಗದಿಪಡಿಸಿರುವ ಅವಧಿಯನ್ನು ತಕ್ಷಣ ವಿಸ್ತರಿಸುವಂತೆ ಒತ್ತಾಯಿಸಿ ಲಕ್ಷೇಶ್ವರ ತಾಲೂಕು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳ ಪ್ರಾದೇಶಿಕ ವ್ಯವಸ್ಥಾಪಕರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆಯಲ್ಲಿನ ಗೊಂದಲ, ಬ್ಯಾಂಕ್ಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ತಾಂತ್ರಿಕ ಅಡಚಣೆಗಳು, ಸರ್ವರ್ ವೈಫಲ್ಯ, ದಾಖಲೆಗಳ ಗೊಂದಲ, ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ರೈತ ಮುಖಂಡರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನಿಯಮಿತವಾಗಿ ವಿಮೆ ಕಂತು ಪಾವತಿಸುತ್ತಾ ಬಂದಿದ್ದರೂ, ಬೆಳೆ ನಷ್ಟ ಸಂಭವಿಸಿದ ಸಂದರ್ಭಗಳಲ್ಲಿ ಬಹುತೇಕ ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದರು. ಬೆಳೆ ಹಾನಿಯಾದರೂ ಅನೇಕ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಕೆಲವೇ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ದೊರೆತಿದ್ದು, ಬಹುಪಾಲು ರೈತರು ನಿರಾಶರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಮೆ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದು ಹಾಗೂ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅರ್ಜಿಗಳನ್ನು ತಿರಸ್ಕರಿಸುವ ಪ್ರವೃತ್ತಿಯಿಂದ ರೈತರು ಸರ್ಕಾರದ ಯೋಜನೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ದೂರಿದರು.
ಈ ವರ್ಷ ಜಾರಿಗೆ ತಂದಿರುವ ಹೊಸ ನಿಯಮಗಳಿಂದ ರೈತರಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗಿವೆ. ಬ್ಯಾಂಕ್ಗಳಲ್ಲಿ ಕೃಷಿ ಸಾಲ ಪಡೆದಿರುವ ರೈತರು ಬೆಳೆ ಬದಲಾವಣೆ ದೃಢೀಕರಣ ಪತ್ರದೊಂದಿಗೆ ಮಾತ್ರ ವಿಮೆ ಕಂತು ಪಾವತಿಸಬೇಕೆಂಬ ನಿಯಮ ಜಾರಿಯಾಗಿದೆ. ಆದರೆ ಈ ದಾಖಲೆಗಳನ್ನು ಪಡೆಯಲು ರೈತರು ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಬ್ಯಾಂಕ್ಗಳ ನಡುವೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸಾವಿರಾರು ರೈತರು ಅಗತ್ಯ ದಾಖಲೆಗಳನ್ನು ಸಕಾಲಕ್ಕೆ ಒದಗಿಸಲು ಸಾಧ್ಯವಾಗದೆ ವಿಮೆ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ. ಆದ್ದರಿಂದ ಕನಿಷ್ಠ ಕೆಲವು ವಾರಗಳ ಕಾಲಾವಕಾಶ ನೀಡುವ ಮೂಲಕ ಎಲ್ಲ ರೈತರಿಗೆ ವಿಮೆ ಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಾಲ ಪಡೆಯದ ರೈತರಿಗೆ ಸ್ವಘೋಷಣಾ ಪತ್ರದ ಮೂಲಕ ಕರ್ನಾಟಕ ಒನ್ ಹಾಗೂ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್ಸಿ)ಗಳಲ್ಲಿ ವಿಮೆ ಕಂತು ಪಾವತಿಸಲು ಅವಕಾಶ ನೀಡಲಾಗಿದ್ದರೂ, ಅಲ್ಲಿಯೂ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ, ದಾಖಲೆಗಳ ಅಪ್ಲೋಡ್ ಸಮಸ್ಯೆ ಹಾಗೂ ವ್ಯವಸ್ಥೆಯ ವೈಫಲ್ಯದಿಂದ ರೈತರು ದಿನವಿಡೀ ಕಾಯುವಂತಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸೋಮವಾರ ಲಕ್ಷೇಶ್ವರ ಹಾಗೂ ಸುತ್ತಮುತ್ತಲಿನ ಬ್ಯಾಂಕ್ಗಳು, ಕರ್ನಾಟಕ ಒನ್ ಕೇಂದ್ರಗಳು ಮತ್ತು ಸಿಎಸ್ಸಿ ಕೇಂದ್ರಗಳ ಮುಂದೆ ಬೆಳಗ್ಗೆಯಿಂದಲೇ ನೂರಾರು ರೈತರು ಸಾಲುಗಟ್ಟಿ ನಿಂತಿದ್ದರು. ಆದರೆ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ತೊಂದರೆಗಳಿಂದ ಬಹುತೇಕ ರೈತರಿಗೆ ವಿಮೆ ಕಂತು ಪಾವತಿಸಲು ಸಾಧ್ಯವಾಗಲಿಲ್ಲ. ದಿನವಿಡೀ ಕಾಯ್ದು ಕೊನೆಗೆ ನಿರಾಶರಾಗಿ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.
ಬ್ಯಾಂಕ್ಗಳಲ್ಲಿ ಕನ್ನಡ ಭಾಷೆ ಬಲ್ಲ ಸಿಬ್ಬಂದಿ ಕೊರತೆ, ರೈತರಿಗೆ ಸರಿಯಾದ ಮಾಹಿತಿ ನೀಡದಿರುವುದು ಹಾಗೂ ಹೊಸ ನಿಯಮಗಳ ಕುರಿತು ಸಮರ್ಪಕ ಅರಿವು ಮೂಡಿಸದಿರುವುದರಿಂದ ಗೊಂದಲ ಮತ್ತಷ್ಟು ಹೆಚ್ಚಾಗಿದೆ ಎಂದು ರೈತರು ಆರೋಪಿಸಿದರು. ರೈತರಿಗೆ ಸರಳ ಹಾಗೂ ಪಾರದರ್ಶಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು, ಜಿಲ್ಲೆಯಲ್ಲಿ ಮಳೆ ಕೊರತೆ, ಕೆಲವೆಡೆ ಅತಿವೃಷ್ಟಿ, ಬೆಳೆಗಳಿಗೆ ಕಾಡುತ್ತಿರುವ ವಿವಿಧ ರೋಗಗಳು ಹಾಗೂ ನಿರಂತರ ಹವಾಮಾನ ವೈಪರೀತ್ಯದಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ಪಡೆಯುವ ಅವಕಾಶವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ ರೈತರು ಸಂಪೂರ್ಣ ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ ಎಂದು ಎಚ್ಚರಿಸಿದರು.
ಲಕ್ಷೇಶ್ವರ ತಾಲೂಕಿನಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿದ್ದು, ಹಲವೆಡೆ ಬಿತ್ತನೆ ಮಾಡಿದ ಬೆಳೆಗಳು ಬೆಳವಣಿಗೆ ಕಾಣುತ್ತಿಲ್ಲ. ಆದ್ದರಿಂದ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ವಿಶೇಷ ಪರಿಹಾರ, ಬೆಳೆ ನಷ್ಟ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಾಲೂಕು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, “ಬೆಳೆ ವಿಮೆ ನಿಯಮಗಳಲ್ಲಿನ ಗೊಂದಲವನ್ನು ಸರ್ಕಾರ ತಕ್ಷಣ ನಿವಾರಿಸಬೇಕು. ಸರ್ವರ್ ಸಮಸ್ಯೆಯಿಂದ ಸಾವಿರಾರು ರೈತರು ವಿಮೆ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಪಾವತಿ ಅವಧಿಯನ್ನು ವಿಸ್ತರಿಸಿ ಎಲ್ಲ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಸಾವಿರಾರು ರೈತರು ವಿಮೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ,” ಎಂದು ಎಚ್ಚರಿಸಿದರು.
ರೈತರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಆದರೆ ರೈತರು ಮಾತ್ರ ಬೆಳೆ ವಿಮೆ ಅವಧಿ ವಿಸ್ತರಣೆ ಹಾಗೂ ನಿಯಮಗಳ ಸರಳೀಕರಣ ಕುರಿತು ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP