
ಕೋಲಾರ,ಜು.೧೫ (ಹಿ.ಸ):
ಆ್ಯಂಕರ್ : ಕೋಲಾರದ ಜೆಡಿಎಸ್ ರಾಜಕೀಯ ಅಖಾಡದಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿರುವ ಬೆನ್ನಲ್ಲೇ, ಪಕ್ಷದ ಜನಪ್ರಿಯ ಮುಖಂಡ ಸಿ.ಎಂ.ಆರ್. ಶ್ರೀನಾಥ್ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಬೆಳವಣಿಗೆ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಬೆವರು ಸುರಿಸಿ, ಕೆ. ಶ್ರೀನಿವಾಸಗೌಡರು ಪಕ್ಷ ತೊರೆದ ಸಂಕಷ್ಟದ ಕಾಲದಲ್ಲಿ ಜೆಡಿಎಸ್ ಬಾವುಟವನ್ನು ಎತ್ತಿಹಿಡಿದಿದ್ದ ಶ್ರೀನಾಥ್, ಇದೀಗ ತಮ್ಮ ರಾಜಕೀಯ ಅಳಿವು-ಉಳಿವಿನ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಐಪಿಎಸ್ ಅಧಿಕಾರಿ ಡಿ. ದೇವರಾಜ್ ಅವರ ಸಕ್ರಿಯ ಪ್ರವೇಶ ಮತ್ತು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿ ಅವರ ನಡೆ ಶ್ರೀನಾಥ್ ಅವರ ನಿದ್ದೆಗೆಡಿಸಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಭೇಟಿ ರಾಜಕೀಯವಾಗಿ ಅತ್ಯಂತ ಮಹತ್ವದ ತಿರುವು ಪಡೆದುಕೊಂಡಿದೆ.
ಪಕ್ಷದ ಸಂಘಟನೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಗಂಭೀರವಾಗಿ ಚರ್ಚಿಸಿರುವ ಶ್ರೀನಾಥ್, ಕೇವಲ ರಾಜಕೀಯ ಲೆಕ್ಕಾಚಾರಗಳಿಗೆ ಸೀಮಿತವಾಗದೆ, ಜಿಲ್ಲೆಯ ರೈತರ ಸಂಕಷ್ಟಗಳನ್ನು ಕೇಂದ್ರದ ಮಟ್ಟದಲ್ಲಿ ಪ್ರತಿಧ್ವನಿಸುವ ಮೂಲಕ ತಮ್ಮ ನಾಯಕತ್ವವನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ. ಮಳೆ ಇಲ್ಲದೆ ಕಂಗೆಟ್ಟಿರುವ ರೈತರು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಣ್ಣೀರು ಹಾಕುತ್ತಿರುವ ಮಾವು ಮತ್ತು ಟೊಮೆಟೊ ಬೆಳೆಗಾರರ ಪರವಾಗಿ ದನಿಯಾಗಿರುವ ಅವರು, ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮನವಿ ಪತ್ರ ಸಲ್ಲಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಿ ರೈತರ ಪಾಲಿನ ಆಶಾಕಿರಣವಾಗಿದ್ದ ಕುಮಾರಸ್ವಾಮಿಯವರ ಹಳೆಯ ಮಾದರಿಯನ್ನೇ ಈಗಿನ ಸಂದರ್ಭದಲ್ಲೂ ಜಾರಿಗೆ ತರಬೇಕೆಂದು ಒತ್ತಾಯಿಸಿರುವ ಶ್ರೀನಾಥ್, ರಾಜ್ಯ ಸರ್ಕಾರದ ಬರಪೀಡಿತ ಪ್ರದೇಶಗಳ ಘೋಷಣೆಯ ನಿರ್ಲಕ್ಷ್ಯವನ್ನೂ ಚರ್ಚೆಯ ಮುನ್ನೆಲೆಗೆ ತಂದಿದ್ದಾರೆ.
ಒಂದೆಡೆ ಕೋಲಾರ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದ ಬದಲಾವಣೆಗಾಗಿ ಕಾರ್ಯಕರ್ತರ ವಲಯದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಶ್ರೀನಾಥ್ ಅವರ ಜೊತೆಗೆ ಎಂ. ಮಲ್ಲೇಶ್ ಬಾಬು, ಡಿ.ವಿ. ಹರೀಶ್ ಮತ್ತು ಆನಂದ ರೆಡ್ಡಿ ಅವರ ಹೆಸರುಗಳು ಕೇಳಿಬರುತ್ತಿವೆ. ಆರ್ಥಿಕವಾಗಿ ಸಬಲರಾಗಿರುವ ಆನಂದ ರೆಡ್ಡಿ ಅವರ ಪ್ರವೇಶ ರಾಜಕೀಯ ಸಮೀಕರಣಗಳನ್ನು ಬದಲಿಸುವ ಮುನ್ಸೂಚನೆ ನೀಡಿದೆ. ಈ ಎಲ್ಲಾ ಆಂತರಿಕ ಸವಾಲುಗಳ ನಡುವೆಯೇ, ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ತಳಮಟ್ಟದಲ್ಲಿ ಹೋರಾಟ ರೂಪಿಸಲು ಕುಮಾರಸ್ವಾಮಿಯವರು ಶ್ರೀನಾಥ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ದೆಹಲಿ ಭೇಟಿಯ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ಸಿ.ಎಂ.ಆರ್. ಶ್ರೀನಾಥ್, ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯ ರಾಜಕಾರಣವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಕೋಲಾರದ ಜನಪ್ರಿಯ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ದೆಹಲಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ಸಮಯದಲ್ಲಿ ಶ್ರೀನಾಥ್ ರೈತರ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಮಾವು ಬೆಲೆ ಕುಸಿದಾಗಲೂ ಮಂಡ್ಯ ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಬೆಂಬಲ ಬೆಲೆ ಘೋಷಿಸಿ ಸಂಕಷ್ಟಕ್ಕೆ ನೆರವಾಗುವಂತೆ ಶ್ರೀನಾಥ್ ಮನವಿ ಮಾಡಿದರು.
ರಾಜ್ಯದ ಸಾವಿರಾರು ರೈತರು ಮಾವು ಮತ್ತು ಟೊಮೆಟೊ ಬೆಳೆಗಳನ್ನು ನಂಬಿಕೊ0ಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದ ಕಾರಣ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಮಾವಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಘೋಷಿಸಲು ನೀವು ಕೈಗೊಂಡಿರುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಿ, ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ ಮತ್ತಷ್ಟು ಬೆಂಬಲ ಬೆಲೆ ದೊರಕಿಸಿಕೊಡಬೇಕು. ಜೊತೆಗೆ ಟೊಮೆಟೊ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ಋತುವಿನಲ್ಲಿ ರಾಜ್ಯದಲ್ಲಿ ಸುಮಾರು ೫.೨೦ ಲಕ್ಷ ಟನ್ ಮಾವು ಇಳುವರಿ ನಿರೀಕ್ಷೆಯಿದ್ದರೂ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಅನೇಕ ರೈತರು ತೋಟದಲ್ಲೇ ಕಾಯಿ ಕೀಳದೆ ಬಿಡುವಂತಾಗಿದೆ. ಮತ್ತೊಮ್ಮೆ ಕೇಂದ್ರ ಕೃಷಿ ಸಚಿವ ಅವರೊಂದಿಗೆ ಚರ್ಚೆ ನಡೆಸುವಂತೆ ಸಿಎಂಆರ್ ಶ್ರೀನಾಥ್ ಅವರ ಮನವಿಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಂದಿಸಿದ್ದಾರೆ .
ಟೊಮೆಟೊ ಬೆಳೆಗಾರರ ಪರಿಸ್ಥಿತಿಯೂ ಅಷ್ಟೇ ದುಸ್ಥಿತಿಯಲ್ಲಿದ್ದು, ರೈತರಿಗೆ ಹೂಡಿಕೆ ಮಾಡಿದ ಬಂಡವಾಳವೂ ಮರಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಿದ್ದರಿಂದ ಸಾವಿರಾರು ರೈತರಿಗೆ ನೆರವಾಗಿತ್ತು. ಅದೇ ಮಾದರಿಯ ಕ್ರಮವನ್ನು ಮತ್ತೆ ಜಾರಿಗೆ ತರಬೇಕೆಂದು ಶ್ರೀನಾಥ್ ಮನವಿ ಮಾಡಿದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಳುಮೆ ಹಾಗೂ ಬಿತ್ತನೆ ಕಾರ್ಯಗಳು ಕುಂಠಿತಗೊAಡಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಿದೆ. ಗೋಶಾಲೆಗಳ ನಿರ್ವಹಣೆಯಲ್ಲಿಯೂ ಸಮಸ್ಯೆಗಳು ಎದುರಾಗಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ರಾಜ್ಯದ ಬರಪೀಡಿತ ತಾಲೂಕುಗಳನ್ನು ತಕ್ಷಣವೇ ಘೋಷಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕುಮಾರಸ್ವಾಮಿ ಅವರ ಗಮನ ಸೆಳೆದರು.
ಈ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಹೋರಾಟ ಸಂಘಟಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂಆರ್ ಶ್ರೀನಾಥ್ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದ್ದು, ಮಾವು, ಟೊಮೆಟೊ ಬೆಳೆಗಾರರಿಗೆ ಬೆಂಬಲ ಬೆಲೆ ಹಾಗೂ ಬರಪೀಡಿತ ಪ್ರದೇಶ ಘೋಷಣೆ ಕುರಿತಂತೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್