
ಗದಗ, 15 ಜುಲೈ (ಹಿ.ಸ.)
ಆ್ಯಂಕರ್:- ಪೂಜ್ಯಗುರು ಅನ್ನದಾನ ಮಹಾಸ್ವಾಮಿಗಳ ದೂರದೃಷ್ಟಿ, ತ್ಯಾಗ ಹಾಗೂ ಶಿಕ್ಷಣದ ಮೇಲಿನ ಅಪಾರ ಕಾಳಜಿಯಿಂದ ಆರಂಭವಾದ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ, ವಿಶೇಷವಾಗಿ ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸತ್ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 1943ರಲ್ಲಿ ಪೂಜ್ಯಗುರು ಅನ್ನದಾನ ಮಹಾಸ್ವಾಮಿಗಳ ಆಶಯದಂತೆ ಸ್ಥಾಪನೆಯಾದ ಈ ಶಿಕ್ಷಣ ಸಂಸ್ಥೆ ಶಿಕ್ಷಣವನ್ನು ಸಮಾಜ ಪರಿವರ್ತನೆಯ ಪ್ರಮುಖ ಸಾಧನವನ್ನಾಗಿ ರೂಪಿಸಿಕೊಂಡಿದೆ ಎಂದು ಹೇಳಿದರು.
1972ರಲ್ಲಿ ಆರಂಭವಾದ ಬಾಲಕಿಯರ ಪ್ರೌಢಶಾಲೆ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಸಾವಿರಾರು ವಿದ್ಯಾರ್ಥಿನಿಯರ ಭವಿಷ್ಯವನ್ನು ರೂಪಿಸಿದೆ. ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯರು ಇಂದು ಶಿಕ್ಷಕಿಯರು, ವೈದ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ ಸಮಾಜ ಸೇವೆಯಲ್ಲಿ ತೊಡಗಿರುವುದು ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ಉತ್ತಮ ವ್ಯಕ್ತಿತ್ವ, ನೈತಿಕ ಮೌಲ್ಯಗಳು ಮತ್ತು ಸಮಾಜಮುಖಿ ಬದುಕನ್ನು ರೂಪಿಸುವ ಶಕ್ತಿಯಾಗಿದೆ. ಅನ್ನದಾನ ಮಹಾಸ್ವಾಮಿಗಳ ಶಿಕ್ಷಣದ ಕನಸು ಇಂದು ಸಾವಿರಾರು ವಿದ್ಯಾರ್ಥಿನಿಯರ ಬದುಕನ್ನು ಬೆಳಗಿಸುತ್ತಿದ್ದು, ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ನಮ್ಮ ಸಂಸ್ಥೆ ಸಾಬೀತುಪಡಿಸಿದೆ ಎಂದು ರವೀಂದ್ರನಾಥ ದೊಡ್ಡಮೇಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿದ ಎಸ್.ಎ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಕಲೆ, ಸಾಹಿತ್ಯ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಸಂಸತ್ ಫಲಕವನ್ನು ಉದ್ಘಾಟಿಸಿದ ಅಭಿನವ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಅನಸೂಯಾ ಪಾಟೀಲ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿಯ ಪ್ರಜ್ಞೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಸ್ಥಾಪಕರ ದಿನಾಚರಣೆಯನ್ನು ವೀರಣ್ಣ ಹಳ್ಳಿ ನೆರವೇರಿಸಿದರು. ಇದೇ ವೇಳೆ 2005–06ನೇ ಸಾಲಿನ ಹಳೆಯ ವಿದ್ಯಾರ್ಥಿನಿಯರು ಶಾಲೆಗೆ ಪ್ರದರ್ಶನ ಫಲಕವನ್ನು ದೇಣಿಗೆಯಾಗಿ ನೀಡಿದ್ದು, ಅದನ್ನು ಗಣ್ಯರು ಉದ್ಘಾಟಿಸಿದರು. ಶಾಲಾ ಸಂಸತ್ ಸದಸ್ಯರಿಗೆ ಎಸ್. ಶಿವಮೂರ್ತಿ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ವಹಿಸಿದ್ದರು. ಎ.ಟಿ. ಮಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಹಳೆಯ ವಿದ್ಯಾರ್ಥಿನಿಯರು, ಪೋಷಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರು ದೇಶಭಕ್ತಿ, ಸಾಂಸ್ಕೃತಿಕ ಹಾಗೂ ಜನಪದ ನೃತ್ಯ, ಗಾಯನ ಸೇರಿದಂತೆ ವಿವಿಧ ಕಲಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು. ಸಂಸ್ಥಾಪಕರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪದೊಂದಿಗೆ ನಡೆದ ಈ ಕಾರ್ಯಕ್ರಮವು ಶಿಕ್ಷಣ, ಸಂಸ್ಕೃತಿ ಮತ್ತು ನಾಯಕತ್ವದ ಮೌಲ್ಯಗಳನ್ನು ಸಾರುವ ಅರ್ಥಪೂರ್ಣ ಸಮಾರಂಭವಾಗಿ ಗಮನ ಸೆಳೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP