ತೋಂಟದಾರ್ಯ ಮಠದಲ್ಲಿ 2806ನೇ ಶಿವಾನುಭವ, ರಂಗಭೂಮಿ ಮಹತ್ವ’ ಕುರಿತು ಉಪನ್ಯಾಸ
ಗದಗ, 12 ಜುಲೈ (ಹಿ.ಸ.) ಆ್ಯಂಕರ್:- ಗದುಗಿನ ಐತಿಹಾಸಿಕ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ 7 ಗಂಟೆಗೆ 2806ನೇ ಶಿವಾನುಭವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಹೆಸರಾಗಿರುವ ಶಿವಾನುಭ
ಫೋಟೋ


ಗದಗ, 12 ಜುಲೈ (ಹಿ.ಸ.)

ಆ್ಯಂಕರ್:- ಗದುಗಿನ ಐತಿಹಾಸಿಕ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ 7 ಗಂಟೆಗೆ 2806ನೇ ಶಿವಾನುಭವ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.

ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಹೆಸರಾಗಿರುವ ಶಿವಾನುಭವ ಕಾರ್ಯಕ್ರಮದಲ್ಲಿ ಈ ಬಾರಿ ಉಪನ್ಯಾಸ, ವಚನ ಸಂಗೀತ, ಧರ್ಮಗ್ರಂಥ ಪಠಣ, ಸನ್ಮಾನ ಹಾಗೂ ವಿಶೇಷ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಶಿವಾನುಭವ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೈಸೂರು ಮೂಲದ ಪತ್ರಕರ್ತ, ಲೇಖಕ ಹಾಗೂ ನಾಟಕಕಾರ ಗಣೇಶ ಅಮೀನಗಡ ಅವರು ‘ರಂಗಭೂಮಿ ಮಹತ್ವ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಮಾಜದಲ್ಲಿ ರಂಗಭೂಮಿಯ ಪಾತ್ರ, ಸಾಂಸ್ಕೃತಿಕ ಪರಂಪರೆಯ ಉಳಿವು ಹಾಗೂ ನಾಟಕಗಳ ಸಾಮಾಜಿಕ ಪ್ರಭಾವದ ಕುರಿತು ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಮೈಸೂರಿನ ಕವಿತಾ ಕಲಾ ತಂಡದಿಂದ ಗಣೇಶ ಅಮೀನಗಡ ಅವರೇ ರಚಿಸಿರುವ ‘ಕೌದಿ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ. ಅಲೆಮಾರಿ ಸಮುದಾಯದ ಬದುಕು, ಮಾನವೀಯ ಸಂಬಂಧಗಳ ಮೌಲ್ಯ, ಹಳೆಯ ಜೀವನ ಶೈಲಿಯ ನೆನಪುಗಳು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಬದುಕಿನ ಹೋರಾಟವನ್ನು ಅನಾವರಣಗೊಳಿಸುವ ಈ ನಾಟಕ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ಗದಗದಲ್ಲಿ ಮತ್ತೊಮ್ಮೆ ಕಲಾಸಕ್ತರ ಮುಂದೆ ಮೂಡಿಬರಲಿದೆ.

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಸಿದ್ದಣ್ಣ ಬಂಗಾರಶೆಟ್ಟರ ದಂಪತಿ ಭಾಗವಹಿಸಲಿದ್ದಾರೆ. ಇದೇ ವೇಳೆ ಇತ್ತೀಚೆಗೆ ವಿವಿಧ ಸೇವಾ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣ್ಯರನ್ನು ಸನ್ಮಾನಿಸಲಾಗುತ್ತದೆ. ಡಾ. ಪಿ.ಎಸ್. ಉಗಲಾಟ (ರೋಟರಿ ಸಂಸ್ಥೆ, ಗದಗ-ಬೆಟಗೇರಿ), ಮಲ್ಲಿಕಾರ್ಜುನ ಸಿ. ಚಂದಪ್ಪನವರ (ರೋಟರಿ ಸಂಸ್ಥೆ, ಗದಗ ಸೆಂಟ್ರಲ್) ಹಾಗೂ ಪ್ರವೀಣ್ ವಾರಕರ (ಲಾಯನ್ಸ್ ಸಂಸ್ಥೆ, ಗದಗ) ಅವರನ್ನು ಗೌರವಿಸಿ ಅಭಿನಂದಿಸಲಾಗುತ್ತದೆ.

ಶಿವಾನುಭವ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರ ಸಂಗಡಿಗರಿಂದ ವಚನ ಸಂಗೀತ ನಡೆಯಲಿದ್ದು, ದೀಕ್ಷಾ ಸಂಗನಾಯ್ಕರ ಅವರು ಧರ್ಮಗ್ರಂಥ ಪಠಣ ನಡೆಸಲಿದ್ದಾರೆ. ಪ್ರತೀಕ್ಷಾ ಮಹಾಂತೇಶ ಪೂಜಾರ ಅವರು ವಚನ ಚಿಂತನೆ ಮಂಡಿಸಲಿದ್ದಾರೆ.

ಕಾರ್ಯಕ್ರಮದ ದಾಸೋಹ ಹಾಗೂ ಭಕ್ತಿಸೇವೆಯ ಜವಾಬ್ದಾರಿಯನ್ನು ಸಂಸ್ಕೃತಿ ಚಿಂತಕರಾದ ಡಾ. ಜಿ.ಬಿ. ಪಾಟೀಲ ವಹಿಸಿಕೊಂಡಿದ್ದಾರೆ. ಸಾಹಿತ್ಯ, ಧರ್ಮ, ಸಂಗೀತ ಹಾಗೂ ರಂಗಭೂಮಿಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಶಿವಾನುಭವ ಕಾರ್ಯಕ್ರಮವು ಜಿಲ್ಲೆಯ ಕಲಾ ಮತ್ತು ಸಾಂಸ್ಕೃತಿಕ ವಲಯಕ್ಕೆ ಮತ್ತೊಂದು ಮಹತ್ವದ ಕೊಡುಗೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜಿಲ್ಲೆಯ ಕಲಾಸಕ್ತರು, ಸಾಹಿತ್ಯಾಭಿಮಾನಿಗಳು, ವಚನಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande