
ಗದಗ, 12 ಜುಲೈ (ಹಿ.ಸ.)
ಆ್ಯಂಕರ್:- ಉತ್ತರ ಕರ್ನಾಟಕದ ಕೃಷಿ ಪ್ರಧಾನ ಜಿಲ್ಲೆಗಳಲ್ಲೊಂದಾದ ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಹೊಲಗಳಲ್ಲಿ ಹಚ್ಚಹಸಿರಾಗಿರಬೇಕಿದ್ದ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ. ಮಳೆಯನ್ನೇ ನಂಬಿ ಕೃಷಿ ಮಾಡುವ ಸಾವಿರಾರು ರೈತರಲ್ಲಿ ಆತಂಕ ಮನೆ ಮಾಡಿದ್ದು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲವಾಗುತ್ತಿದೆ.
2026-27ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 3 ಲಕ್ಷ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಈ ಪೈಕಿ ಈಗಾಗಲೇ 2 ಲಕ್ಷ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಇದು ಒಟ್ಟು ಗುರಿಯ ಶೇ.75ರಷ್ಟಾಗಿದೆ. ಆರಂಭದಲ್ಲಿ ಸುರಿದ ಕೆಲವೇ ಮಳೆಗಳ ಆಶಾಭರವಿನಿಂದ ರೈತರು ಬೀಜ, ಗೊಬ್ಬರ, ಕೂಲಿ ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಿತ್ತನೆ ಕಾರ್ಯ ಮುಗಿಸಿದ್ದರು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಜೂನ್ನಿಂದ ಜುಲೈ ಆರಂಭದವರೆಗೆ ಜಿಲ್ಲೆಯಲ್ಲಿ ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ.
ಮಳೆಯ ಅಭಾವದಿಂದ ಹೆಸರು, ಗೋವಿನ ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ಹಲವು ಬೆಳೆಗಳು ನೀರಿನ ಕೊರತೆಯಿಂದ ಬೆಳವಣಿಗೆ ಕಾಣದೆ ಒಣಗುತ್ತಿವೆ. ಅನೇಕ ಕಡೆಗಳಲ್ಲಿ ಮೊಳಕೆಯೊಡೆದ ಸಸಿಗಳು ಸಂಪೂರ್ಣ ಕಮರಿ ಹೋಗಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಬೆಳೆಗಳು ಜೀವ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಏಳು ತಾಲೂಕುಗಳಾದ ಗದಗ, ಬೆಟಗೇರಿ, ನರಗುಂದ, ರೋಣ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಭಾಗಗಳಲ್ಲಿಯೂ ಸಮರ್ಪಕ ಮಳೆಯಾಗಿಲ್ಲ. ಎಲ್ಲೆಡೆ ಒಂದೇ ರೀತಿಯ ಬರದ ವಾತಾವರಣ ನಿರ್ಮಾಣವಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿವೆ. ಮಳೆಯನ್ನೇ ನಂಬಿಕೊಂಡಿರುವ ರೈತರು ಪ್ರತಿದಿನ ಆಕಾಶದತ್ತ ದೃಷ್ಟಿ ನೆಟ್ಟಿದ್ದರೂ, ವರುಣ ಮಾತ್ರ ಕರುಣೆ ತೋರುತ್ತಿಲ್ಲ.
ಸಾಲ-ಸೂಲ ಮಾಡಿ, ಚಿನ್ನ ಅಡವಿಟ್ಟು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಕೃಷಿ ಮಾಡಿರುವ ರೈತರು ಈಗ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ಹಾನಿಯಾದರೆ ಸಾಲ ಮರುಪಾವತಿ ಹೇಗೆ ಮಾಡುವುದು ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ಮತ್ತೊಮ್ಮೆ ಬಿತ್ತನೆ ಮಾಡುವ ಸಾಮರ್ಥ್ಯವೂ ಉಳಿದಿಲ್ಲ ಎಂದು ರೈತ ಸಂಘಗಳ ಮುಖಂಡರು ಹೇಳುತ್ತಿದ್ದಾರೆ.
ಈ ನಡುವೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಆಡಳಿತ ಯಂತ್ರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಬರದ ಪರಿಸ್ಥಿತಿ ಸ್ಪಷ್ಟವಾಗಿದ್ದರೂ ಜಿಲ್ಲಾಡಳಿತವು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ ಬರ ಘೋಷಣೆಗೆ ಶಿಫಾರಸು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಹೊಲಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಅರಿಯಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ನಾಲ್ವರು ಶಾಸಕರು ಮೋಡ ಬಿತ್ತನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಒತ್ತಾಯಿಸಿರುವುದಾಗಿ ರೈತರು ಹೇಳುತ್ತಿದ್ದಾರೆ. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೋಡ ಬಿತ್ತನೆಯಂತಹ ತುರ್ತು ಕ್ರಮಗಳ ಜೊತೆಗೆ ಬೆಳೆ ಸಮೀಕ್ಷೆ ನಡೆಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಘೋಷಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
ಮಳೆಯ ಕೊರತೆ ಕೃಷಿಗೆ ಮಾತ್ರ ಸೀಮಿತವಾಗಿಲ್ಲ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುವ ಲಕ್ಷಣಗಳು ಕಂಡುಬರುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ಜಾನುವಾರುಗಳನ್ನು ಮಾರಾಟ ಮಾಡಿ ಉದ್ಯೋಗ ಅರಸಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಗ್ರಾಮೀಣ ಭಾಗದಲ್ಲಿ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಗದಗ ಜಿಲ್ಲೆಯಲ್ಲಿ ಮುಂಗಾರು ವೈಫಲ್ಯ ರೈತರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದೆ. ತಕ್ಷಣವೇ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ, ಬೆಳೆ ಸಾಲ ಮರುಪಾವತಿಗೆ ವಿನಾಯಿತಿ, ಅಗತ್ಯ ಪರಿಹಾರ ಪ್ಯಾಕೇಜ್ ಹಾಗೂ ಕೃಷಿ ಪುನಶ್ಚೇತನಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕೆಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸರ್ಕಾರ ಈ ಮನವಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದನ್ನು ಜಿಲ್ಲೆಯ ರೈತರು ಕಾತರದಿಂದ ಎದುರು ನೋಡುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP