
ಗದಗ, 12 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವ ಹೆಚ್.ಕೆ. ಪಾಟೀಲ್ ಅವರ ಪುತ್ರ ಕೃಷ್ಣಗೌಡ್ರು ಎಚ್. ಪಾಟೀಲ್ ಅವರು ಸಾರ್ವಜನಿಕ ಸೇವೆಯ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಅವರ ಸಾರ್ವಜನಿಕ ಸೇವೆ, ಜನಪರ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಅಧಿಕಾರ ಎಂದರೆ ಅಹಂಕಾರವಲ್ಲ, ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿ ಎಂಬುದನ್ನು ಕೃಷ್ಣಗೌಡ್ರು ಎಚ್. ಪಾಟೀಲ್ ತಮ್ಮ ನಡೆ-ನುಡಿಯ ಮೂಲಕ ತೋರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅವರ ಪ್ರಕಾರ, ಕೃಷ್ಣಗೌಡ್ರು ಪಾಟೀಲ್ ಅವರು ಜಿಲ್ಲೆಯ ಬಡವರು, ರೈತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಜನರ ಅಹವಾಲುಗಳಿಗೆ ಸಾಧ್ಯವಾದಷ್ಟು ಶೀಘ್ರ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸರಳವಾಗಿ ಬೆರೆಯುವ ಅವರ ಗುಣವೇ ಅವರನ್ನು ಯುವ ನಾಯಕನಾಗಿ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಪ್ರಕಟಣೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಶಸ್ತ್ರಚಿಕಿತ್ಸಾ ಶಿಬಿರಗಳು ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇವೆ ತಲುಪಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು, ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಅಗತ್ಯ ಸಹಕಾರ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ 'ಹಸಿರು ಗದಗ' ಅಭಿಯಾನದಡಿ ಸಾವಿರಾರು ಸಸಿಗಳನ್ನು ನೆಡುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಯುವಕರಿಗೆ ಉದ್ಯೋಗಾವಕಾಶ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಹಿರಿಯ ಮುಖಂಡ ಹನುಮಂತಪ್ಪ ರಾಂಪೂರ ಮಾತನಾಡಿ, ಕೃಷ್ಣಗೌಡ್ರು ಪಾಟೀಲ್ ಅವರು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ಹೊಂದಿದ್ದು, ಯಾವುದೇ ಸಮಯದಲ್ಲೂ ಸಾರ್ವಜನಿಕರ ಸೇವೆಗೆ ಸಿದ್ಧರಾಗಿರುವ ನಾಯಕ ಎಂದು ಅಭಿಪ್ರಾಯಪಟ್ಟರು. ಅವರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಎನ್. ಬಳ್ಳಾರಿ, ಅಬ್ದುಲ್ ಮುನಾಫ್ ಮುಲ್ಲಾ, ಪರಶುರಾಮ ಕೋಟೆಕಲ್ಲ, ರಾಜು ಮಾನೆ, ವಿಕಾಸ ಕ್ಷೀರಸಾಗರ, ಆಂಜನೇಯ ಆದೋನಿ, ಯಲ್ಲಪ್ಪ ರಾಯಚೂರ, ನರಸಿಂಹ ಗುರುಜಾಲಕರ, ಯಲ್ಲಪ್ಪ ರಾಂಪೂರ, ಮಂಜುನಾಥ ಮಾನೆ, ಅರುಣ ರಾಂಪೂರ, ಹೇಮಂತ ಒಡ್ಡೆಪಲ್ಲೆ, ಜಮ್ಮಣ್ಣ ಕಡುಮುರ ಸೇರಿದಂತೆ ಸವಿತಾ ಸಮಾಜ, ಮರಾಠ ಕ್ಷೌರಿಕ ಸಮಾಜದ ವಿವಿಧ ಪದಾಧಿಕಾರಿಗಳು, ಮುಖಂಡರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ಸವಿತಾ ಸಮಾಜ ಮತ್ತು ಮರಾಠ ಕ್ಷೌರಿಕ ಸಮಾಜದ ಪದಾಧಿಕಾರಿಗಳು ಸೇರಿದಂತೆ ಸಮಾಜದ ಸಾವಿರಾರು ಸದಸ್ಯರ ಪರವಾಗಿ ಕೃಷ್ಣಗೌಡ್ರು ಎಚ್. ಪಾಟೀಲ್ ಅವರಿಗೆ ಶುಭ ಹಾರೈಸಲಾಯಿತು. ಸಾರ್ವಜನಿಕ ಜೀವನದಲ್ಲಿ ಅವರು ಇನ್ನಷ್ಟು ಯಶಸ್ಸು ಸಾಧಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಲಿ ಎಂದು ಮುಖಂಡರು ಆಶಿಸಿದರು.
ಸನ್ಮಾನ ಕಾರ್ಯಕ್ರಮವು ಸಮಾಜದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನೆರವೇರಿದ್ದು, ಕೃಷ್ಣಗೌಡ್ರು ಎಚ್. ಪಾಟೀಲ್ ಅವರ ಒಂದು ವರ್ಷದ ಸಾರ್ವಜನಿಕ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ನಡೆಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP