ಜನಗಣತಿ, ಶಾಖೆಗಳ ವಿಸ್ತರಣೆ, ಮಾದಕ ವ್ಯಸನ ತಡೆಗೆ ಆರ್.ಎಸ್.ಎಸ್ ಒತ್ತು
ಬೆಳಗಾವಿ, 12 ಜುಲೈ (ಹಿ.ಸ.): ಆ್ಯಂಕರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಮೂರು ದಿನಗಳ ಚರ್ಚೆಯ ಬಳಿಕ ಭಾನುವಾರ ಬೆಳಗಾವಿಯಲ್ಲಿ ಮುಕ್ತಾಯಗೊಂಡಿದ್ದು, ಸಂಘದ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ಕಾರ್ಯಕ್ರಮಗಳು, ಜನಗಣತಿ, ಜನಸಂಖ್ಯಾ ಅಸಮತೋಲ
ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಮುಕ್ತಾಯ


ಬೆಳಗಾವಿ, 12 ಜುಲೈ (ಹಿ.ಸ.):

ಆ್ಯಂಕರ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಮೂರು ದಿನಗಳ ಚರ್ಚೆಯ ಬಳಿಕ ಭಾನುವಾರ ಬೆಳಗಾವಿಯಲ್ಲಿ ಮುಕ್ತಾಯಗೊಂಡಿದ್ದು, ಸಂಘದ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ಕಾರ್ಯಕ್ರಮಗಳು, ಜನಗಣತಿ, ಜನಸಂಖ್ಯಾ ಅಸಮತೋಲನ, ಮಾದಕ ವ್ಯಸನ ತಡೆ ಹಾಗೂ ಸಾಮಾಜಿಕ ಜಾಗೃತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ನಿರ್ಣಾಯಕ ಚರ್ಚೆ ನಡೆಸಲಾಗಿದೆ.

ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 226 ಮಂದಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಂಘದ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ,

ಸಭೆಯಲ್ಲಿ ಮಾರ್ಚ್ 2026ರ ಬಳಿಕ ದೇಶಾದ್ಯಂತ ನಡೆದ 83 ಸಂಘ ಶಿಕ್ಷಣ ವರ್ಗಗಳು ಮತ್ತು 12 ಕಾರ್ಯಕರ್ತರ ಅಭಿವೃದ್ಧಿ ವರ್ಗಗಳ ಪರಿಶೀಲನೆ ನಡೆಸಲಾಯಿತು. ಈ ತರಬೇತಿ ಶಿಬಿರಗಳಲ್ಲಿ ಒಟ್ಟು 18,842 ಸ್ವಯಂಸೇವಕರು ಭಾಗವಹಿಸಿದ್ದು, ಶಾಖಾ ನಿರ್ವಹಣೆ, ಸಂಘದ ಕಾರ್ಯಪದ್ಧತಿ, ಗ್ರಾಮಾಭಿವೃದ್ಧಿ, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಶಾಖೆಗಳ ವಿಸ್ತರಣೆಗೆ ವಿಶೇಷ ಕಾರ್ಯಯೋಜನೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ಈಗಾಗಲೇ ನಡೆದ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಸಭೆ, ಉಳಿದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಿತು. ಶತಮಾನೋತ್ಸವ ಕಾರ್ಯಕ್ರಮಗಳ ಮೂಲಕ ಸಂಪರ್ಕಕ್ಕೆ ಬಂದವರನ್ನು ಸಾಮಾಜಿಕ ಸೇವೆ ಹಾಗೂ 'ಪಂಚ ಪರಿವರ್ತನೆ' ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಕುರಿತು ಸಹ ಚರ್ಚಿಸಲಾಯಿತು. 2026–27ನೇ ಸಾಲಿನ ಸರಸಂಘಚಾಲಕರ ಪ್ರವಾಸ ಕಾರ್ಯಕ್ರಮಕ್ಕೂ ಅಂತಿಮ ರೂಪುರೇಷೆ ಕುರಿತು ಸಮಾಲೋಚನೆ ನಡೆಯಿತು ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನಗಣತಿ ಹಾಗೂ ಜನಸಂಖ್ಯಾ ಅಸಮತೋಲನದಿಂದ ಉಂಟಾಗುವ ಸವಾಲುಗಳ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ದೇಶದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಭೆ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಕರೆ ನೀಡಿತು. ಸಂತ ಶಿರೋಮಣಿ ರವಿದಾಸ್ ಮಹಾರಾಜರ 650ನೇ ಜನ್ಮಜಯಂತಿ ವರ್ಷದ ಕಾರ್ಯಕ್ರಮಗಳ ಕುರಿತೂ ಚರ್ಚಿಸಲಾಯಿತು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ದೇಣಿಗೆ ಪೆಟ್ಟಿಗೆಯ ಕಾಣಿಕೆಗಳ ಎಣಿಕೆಯಲ್ಲಿ ನಡೆದಿರುವ ಅಕ್ರಮ ಪ್ರಕರಣದ ಬಗ್ಗೆ ಸಭೆ ದುಃಖ ವ್ಯಕ್ತಪಡಿಸಿತು. ತೀರ್ಥಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ನಡೆಯುತ್ತಿರುವ ಎಸ್‌ಐಟಿ ಹಾಗೂ ಪೊಲೀಸ್ ತನಿಖೆ ನಿರ್ಣಾಯಕ ಹಂತ ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಭೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಟ್ರಸ್ಟ್ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆ ನಿರೀಕ್ಷೆ ವ್ಯಕ್ತಪಡಿಸಿತು ಎಂದು ಸುನೀಲ್ ಅಂಬೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande