ಸಕಲ ಸರ್ಕಾರಿ ಗೌರವಗಳೊಂದಿಗೆ ಗಾನಕೋಗಿಲೆ ಎಸ್. ಜಾನಕಿ ಅಂತ್ಯಕ್ರಿಯೆ
ಮೈಸೂರು, 12 ಜುಲೈ (ಹಿ.ಸ.): ಆ್ಯಂಕರ್: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಭಾನುವಾರ ಮೈಸೂರಿನ ಕಣಿಯನಹುಂಡಿಯಲ್ಲಿರುವ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ನಾಲ್ಕು ವರ್ಷಗಳ ಹಿಂದೆ ಖ
Funeral of  S. Janaki


ಮೈಸೂರು, 12 ಜುಲೈ (ಹಿ.ಸ.):

ಆ್ಯಂಕರ್:

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಭಾನುವಾರ ಮೈಸೂರಿನ ಕಣಿಯನಹುಂಡಿಯಲ್ಲಿರುವ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.

ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಎರಡು ಎಕರೆ ಜಮೀನಿನಲ್ಲೇ ತಮ್ಮ ಅಂತ್ಯಸಂಸ್ಕಾರ ನಡೆಯಬೇಕು ಎಂಬ ಅವರ ಇಚ್ಛೆಯಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶಾಶ್ವತಿ ಕ್ರಿಯಾ ಸಮಿತಿ ವತಿಯಿಂದ ಆಗಮಿಕ ರಮೇಶ್ ಶರ್ಮ ಅವರ ನೇತೃತ್ವದಲ್ಲಿ ಪಂಚಗವ್ಯದಿಂದ ದೇಹ ಶುದ್ಧೀಕರಣ ಸೇರಿದಂತೆ ಸಂಪ್ರದಾಯಬದ್ಧ ವಿಧಿವಿಧಾನಗಳು ನಡೆದವು. ಕಾಡು ಕಟ್ಟಿಗೆ, ಗಂಧ ಹಾಗೂ ತುಳಸಿ ಕಟ್ಟಿಗೆಗಳಿಂದ ಚಿತೆ ನಿರ್ಮಿಸಿ, ಸೂರ್ಯಾಸ್ತಕ್ಕೂ ಮುನ್ನ ಅಗ್ನಿಸ್ಪರ್ಶ ಮಾಡಲಾಯಿತು.

ಇತ್ತೀಚೆಗೆ ಪುತ್ರ ನಿಧನರಾಗಿದ್ದ ಹಿನ್ನೆಲೆಯಲ್ಲಿ, ಅವರ ಮೊಮ್ಮಗಳು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಮೂರು ಸುತ್ತು ಕುಶಾಲತೋಪು ಸಿಡಿಸಿ ರಾಜ್ಯ ಸರ್ಕಾರದಿಂದ ಗೌರವ ಸಲ್ಲಿಸಲಾಯಿತು.

ಅಂತ್ಯಸಂಸ್ಕಾರದಲ್ಲಿ ನೂರಾರು ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ಸಚಿವರು, ಶಾಸಕರು, ವಿವಿಧ ಗಣ್ಯರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್. ಜಾನಕಿ ಅವರು ಶನಿವಾರ ರಾತ್ರಿ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾನುವಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಬಳಿಕ ಕಣಿಯನಹುಂಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande