
ಕೋಲಾರ, ಜುಲೈ ೧೧, (ಹಿ.ಸ):
ಆ್ಯಂಕರ್ : ದೇಶಾದ್ಯಂತ ನಡೆದ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಕೋಲಾರ ಜಿಲ್ಲೆಯಲ್ಲೂ ಶನಿವಾರ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜಿ ಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು.
ಸಣ್ಣ ಪುಟ್ಟ ಕಾರಣಗಳಿಗೆ ವಿಚ್ಛೇದನದ ಹಾದಿ ಹಿಡಿದಿದ್ದ ದಂಪತಿಗಳು ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು, ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಬಾರಿಯ ಲೋಕ ಅದಾಲತ್ನ ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ. ಎಸ್. ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು ರಾಷ್ಟ್ರೀಯ ಹಬ್ಬ ಎಂದು ಬಣ್ಣಿಸಿದರು. ನ್ಯಾಯಾಲಯದ ಕದ ತಟ್ಟುವ ಕಕ್ಷಿದಾರರಿಗೆ ಸಂಧಾನಕಾರರ ಮೂಲಕ ತಿಳಿಹೇಳಿ, ಅವರ ವೈವಾಹಿಕ ಜೀವನವನ್ನು ಮತ್ತೆ ಸರಿದಾರಿಗೆ ತರುವುದು ಅಭೂತಪೂರ್ವ ಕ್ಷಣವಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು ಆರು ದಂಪತಿಗಳು ರಾಜಿ ಮಾಡಿಕೊಂಡು ಒಂದಾಗಿದ್ದು, ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ೧೨, ೨೪ ಕ್ಕೆ ಏರಿಕೆಯಾಗಲಿ, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳೇ ಇಲ್ಲದಂತಾಗಲಿ ಎಂಬುದೇ ನಮ್ಮ ಆಶಯ, ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಕಳೆದ ಎರಡು-ಮೂರು ತಿಂಗಳುಗಳಿAದ ಪ್ರೀ-ಸಿಟ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಿ, ಕಕ್ಷಿದಾರರ ಮನವೊಲಿಸುವ ಕಾರ್ಯವನ್ನು ಮಾಡಲಾಗಿತ್ತು. ಈ ಅದಾಲತ್ನಲ್ಲಿ ಮುಖ್ಯವಾಗಿ ಈ ಕೆಳಗಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು:
ಕೌಟುಂಬಿಕ ವ್ಯಾಜ್ಯಗಳು: ವಿಚ್ಛೇದನ ಹಾಗೂ ಜೀವನಾಂಶ ಪ್ರಕರಣಗಳು. ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂಬ ವರಕವಿ ದ.ರಾ. ಬೇಂದ್ರೆಯವರ ಸಾಲುಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಕೋಲಾರದ ಜನತೆಗೆ ವಿಶೇಷ ಮನವಿ ಮಾಡಿದರು. ಅಣ್ಣ-ತಮ್ಮ, ಅಕ್ಕ-ತಂಗಿ ಅಥವಾ ಸ್ನೇಹಿತರ ನಡುವೆ ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಪ್ರತಿಷ್ಠೆಗಾಗಿ ನ್ಯಾಯಾಲಯದ ಮೆಟ್ಟಿಲೇರಿ ಜೀವನ ಹಾಳುಮಾಡಿಕೊಳ್ಳಬೇಡಿ. ಕೋಲಾರದಲ್ಲಿ 'ರಾಮರಾಜ್ಯ' ನಿರ್ಮಾಣವಾಗಬೇಕು, ಎಂದು ಆಶಿಸಿದರು.
ಆಸ್ತಿ ವಿವಾದಗಳು: ವಿಭಾಗದ ದಾವೆಗಳು ಡಿಕ್ಲರೇಷನ್ ಮತ್ತು ಇಂಜಕ್ಷನ್ ಪ್ರಕರಣಗಳು.
ಬ್ಯಾಂಕ್ ಪ್ರಕರಣಗಳು: ಎನ್.ಐ ಆಕ್ಟ್ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು.
ಪ್ರೀ-ಲಿಟಿಗೇಷನ್ ಪ್ರಕರಣಗಳು: ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಬಗೆಹರಿಸಿಕೊಳ್ಳಲಾದ ವ್ಯಾಜ್ಯಗಳು.
ವಕೀಲರ ಸಂಘದ ಅಧ್ಯಕ್ಷರಾದ ಎಲ್ ಶ್ರೀನಿವಾಸ್ ಮಾತನಾಡಿ ಸಹೋದರ-ಸಹೋದರಿಯರ ನಡುವಿನ ಆಸ್ತಿ ವಿವಾದಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಕುಟುಂಬದಲ್ಲಿ ದ್ವೇಷ, ಅಸೂಯೆ ಮತ್ತು ಜಗಳಗಳು ದೂರವಾಗುತ್ತವೆ. ಇದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಬ್ಯಾಂಕ್ ಪ್ರಕರಣಗಳು ಸೇರಿದಂತೆ ಎಲ್ಲಾ ರೀತಿಯ ಸಿವಿಲ್ ಪ್ರಕರಣಗಳಲ್ಲಿ ಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ. ಆನಂದ ಶೆಟ್ಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್, ನ್ಯಾಯಾಧೀಶರುಗಳಾದ ಶ್ರೀಮತಿ ಬಿ.ಎಸ್. ಜಯಶ್ರೀ, ಮಾಯಣ್ಣ ಬಿ.ಎಲ್., ಶ್ರೀಮತಿ ವಿದ್ಯಾ ಕೆ., ಶ್ರೀಮತಿ ಶರ್ಮಿಳ ಸಿ. ಎಸ್., ಶ್ರೀಮತಿ ಆರತಿ ಬಾಳಪ್ಪ ಕಮತೆ, ಜೈಶಂಕರ್ ಜೆ., ಶ್ರೀಮತಿ ಲಕ್ಷ್ಮೀ.ಎಂ.ವಿ, ಶ್ರೀಮತಿ ಮಮತಾ ಪಿ., ಹರ್ಷ ಜಿ, ಶ್ರೀಮತಿ ಭಾಗ್ಯರತ್ನ ನಾಯಕ್ ಹಾಗೂ ಮಹದೇವಸ್ವಾಮಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ನೀಲಾಚಾರಿ ಬಡಿಗೇರ ಹಾಗೂ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿ. ಆದರ್ಶ್ ಅವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್