
ಬೆಂಗಳೂರು, 07 ಜೂನ್ (ಹಿ.ಸ.) :
ಆ್ಯಂಕರ್ : ವಿಧಾನ ಸೌಧದ ಮೆಟ್ಟಿಲು ಹತ್ತಿಸಿ ರಾಜಕೀಯವಾಗಿ ಬೆಳೆಸಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವುದು ತನ್ನ ಕರ್ತವ್ಯ ಎಂದು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದ ಜನರು ಬಹುಕಾಲದಿಂದ ಭೇಟಿಗೆ ಸಮಯ ಕೇಳುತ್ತಿದ್ದು, ಅದಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರೊಂದಿಗೆ ನೇರವಾಗಿ ಸಂವಾದ ನಡೆಸುತ್ತಿರುವುದಾಗಿ ತಿಳಿಸಿದರು.
“ನನ್ನನ್ನು ದೊಡ್ಡಆಲಹಳ್ಳಿಯಿಂದ ಇಲ್ಲಿಯವರೆಗೆ ಕರೆತಂದವರು ನನ್ನ ಕ್ಷೇತ್ರದ ಜನರು. ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡುವ ಯೋಜನೆಯಿದೆ. ನನ್ನ ಕ್ಷೇತ್ರದ ಜನರು ಎಂದಿಗೂ ತೊಂದರೆ ಕೊಟ್ಟವರಲ್ಲ. ಅವರು ತಮ್ಮ ಕೆಲಸ ಮಾಡಿಕೊಂಡು ಹೋಗುವ ರಾಜಕೀಯ ಪ್ರಜ್ಞೆಯುಳ್ಳ ಜನರು. ಅವರು ಯಾವುದೇ ಅಪೇಕ್ಷೆ ಇಡದಿದ್ದರೂ ಅವರ ಸೇವೆ ಮಾಡುವುದು ನನ್ನ ಕರ್ತವ್ಯ,” ಎಂದು ಹೇಳಿದರು.
ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂಬುದು ತನ್ನ ಆಶಯ ಎಂದು ಹೇಳಿದ ಅವರು, ಸಾತನೂರು ಕ್ಷೇತ್ರ, ದೊಡ್ಡಆಲಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನರು ನಿರಂತರವಾಗಿ ಭೇಟಿಗೆ ಆಗ್ರಹಿಸುತ್ತಿದ್ದರು. ಆದರೆ ಆಡಳಿತಾತ್ಮಕ ಕೆಲಸಗಳ ಒತ್ತಡದಿಂದ ಸಮಯ ನೀಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
“ಯಾರೂ ಬೆಂಗಳೂರಿಗೆ ಬರಬೇಡಿ ಎಂದು ಮನವಿ ಮಾಡಿದ್ದೆ. ಅದಕ್ಕಾಗಿಯೇ ನಾನು ಕ್ಷೇತ್ರಕ್ಕೆ ತೆರಳಿ ಜನರನ್ನು ಭೇಟಿಯಾಗುತ್ತಿದ್ದೇನೆ. ಕಳೆದ 40 ವರ್ಷಗಳಿಂದ ನನ್ನನ್ನು ಬೆಳೆಸಿದ ಜನರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಎಲ್ಲಾ ಸರ್ಕಾರಿ ಕೆಲಸಗಳನ್ನು ಮುಗಿಸಿ ಈಗ ಜನರ ಭೇಟಿಗೆ ತೆರಳುತ್ತಿದ್ದೇನೆ,” ಎಂದು ಹೇಳಿದರು.
ಎಲ್ಪಿಜಿ, ಡೀಸೆಲ್ ಬೆಲೆ ಏರಿಕೆ ಕುರಿತು ಸೋಮವಾರ ಪ್ರತಿಕ್ರಿಯೆ
ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಕುರಿತು ಸಮಗ್ರ ವರದಿ ಕೇಳಿರುವುದಾಗಿ ತಿಳಿಸಿದರು.
“ಗೃಹ ಬಳಕೆಯ ಗ್ಯಾಸ್ ಬೆಲೆ ಏರಿಕೆಗೆ ಹೋಲಿಸಿದರೆ ಕೈಗಾರಿಕಾ ಬಳಕೆಯ ಗ್ಯಾಸ್ ಹಾಗೂ ಡೀಸೆಲ್ ಬೆಲೆ ಏರಿಕೆ ಹೆಚ್ಚು ಆತಂಕಕಾರಿ. ಈ ಕುರಿತು ವರದಿ ಪಡೆದುಕೊಳ್ಳುತ್ತಿದ್ದೇನೆ. ಸೋಮವಾರ ಇದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.