
ಬೆಂಗಳೂರು, 07 ಜೂನ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರಿಗೆ ವಾಹನ ಸಂಚಾರದ ತೊಂದರೆ ಉಂಟುಮಾಡುವ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಹಾಗೂ ಕನಕಪುರ ತಾಲ್ಲೂಕಿನ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿರುವ ‘ಕೃತಜ್ಞತಾ ಸಮರ್ಪಣಾ ಪ್ರವಾಸ’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಮುಖ್ಯಮಂತ್ರಿ, ವಿಧಾನ ಸೌಧದ ಎದುರಿನ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯ ಕೊನೆಯ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲೇ ಪ್ರಯಾಣಿಸಿದರು.
ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಸಂಚಾರದ ವೇಳೆ ಭದ್ರತಾ ಕಾರಣಗಳಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಜಾರಿಯಾಗುವುದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸದಿಂದ ಕನಕಪುರ ರಸ್ತೆಯವರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಜಾರಿಗೊಳಿಸುವುದನ್ನು ತಪ್ಪಿಸಿ, ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಮೆಟ್ರೋ ಸೇವೆಯನ್ನು ಬಳಸಲು ಮುಖ್ಯಮಂತ್ರಿ ನಿರ್ಧರಿಸಿದರು.
ಭಾನುವಾರ ನಡೆಯಲಿರುವ ಕೃತಜ್ಞತಾ ಸಮರ್ಪಣಾ ಪ್ರವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾರೋಹಳ್ಳಿ ಹಾಗೂ ಕನಕಪುರ ಭಾಗದ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಜನರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.