
ನವದೆಹಲಿ, 30 ಜೂನ್ (ಹಿ.ಸ.) :
ಆ್ಯಂಕರ್ : ಆಪರೇಷನ್ ಸಿಂಧೂರ್ ಕುರಿತು ಲೋಕ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಸಿಕೊಂಡು, ಅವರ ವಿರುದ್ಧ ವಿಶೇಷಾಧಿಕಾರ ಉಲ್ಲಂಘನೆ (ಪ್ರಿವಿಲೇಜ್) ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಲೋಕ ಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಲೋಕ ಸಭಾ ಅಧ್ಯಕ್ಷರಿಗೆ ಪತ್ರ ಬರೆದು, ಜುಲೈ 2025ರಲ್ಲಿ ಲೋಕ ಸಭೆಯಲ್ಲಿ ನಡೆದ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ವೇಳೆ ರಕ್ಷಣಾ ಸಚಿವರು ಈ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದರು. ಆದರೆ ಬಳಿಕ ಭಾರತೀಯ ಸೇನೆ ಆ ಕಾರ್ಯಾಚರಣೆಯಲ್ಲಿ ಆರು ಯೋಧರು ಹುತಾತ್ಮರಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೀಗಾಗಿ ಸಂಸತ್ತಿಗೆ ತಪ್ಪು ಮಾಹಿತಿ ನೀಡಿರುವ ಗಂಭೀರ ಪ್ರಕರಣ ಇದಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆ.ಸಿ. ವೇಣುಗೋಪಾಲ್, ರಕ್ಷಣಾ ಸಚಿವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಮತ್ತು ನಂತರ ಬಹಿರಂಗಗೊಂಡ ಸೇನೆಯ ಮಾಹಿತಿಯ ನಡುವೆ ಸ್ಪಷ್ಟ ವಿರೋಧಾಭಾಸವಿದೆ ಎಂದು ಹೇಳಿದ್ದಾರೆ. ಜುಲೈ 2025ರಲ್ಲೇ ಯಾವುದೇ ಯೋಧರು ಹುತಾತ್ಮರಾಗಿಲ್ಲ ಎಂದು ಹೇಳಲಾಗಿದ್ದು, ಒಂದು ವರ್ಷದ ಬಳಿಕ ಆರು ಯೋಧರ ಬಲಿದಾನವನ್ನು ಸೇನೆ ದೃಢಪಡಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಹುತಾತ್ಮರಾದ ಆರು ಯೋಧರ ಕುಟುಂಬಗಳಿಗೆ ಹಾಗೂ ದೇಶದ ಸಶಸ್ತ್ರ ಪಡೆಗಳಿಗೆ ಇದು ಅವಮಾನವಾಗಿದ್ದು, ಅವರ ಸಾಹಸ ಮತ್ತು ಪರಮ ತ್ಯಾಗದ ಕುರಿತು ದೇಶದ ಜನತೆಗೆ ಮಾಹಿತಿ ನೀಡದೇ ಇರುವುದು ದುಃಖಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಆರೋಪಕ್ಕೆ ಪೂರಕವಾಗಿ ಕೆ.ಸಿ. ವೇಣುಗೋಪಾಲ್ ಅವರು 2025ರ ಜುಲೈ 28ರ ಲೋಕಸಭಾ ಕಲಾಪದ ಅಧಿಕೃತ ದಾಖಲೆಯ ಭಾಗವನ್ನೂ ಸಾರ್ವಜನಿಕಗೊಳಿಸಿದ್ದಾರೆ. ಅದರಲ್ಲಿ, ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆಯೇ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿರುವ ರಕ್ಷಣಾ ಸಚಿವರು, ಈ ಕಾರ್ಯಾಚರಣೆಯಲ್ಲಿ ನಮ್ಮ ಯೋಧರಿಗೆ ಯಾವುದೇ ಹಾನಿಯಾಗಿದೆಯೇ? ಎಂಬ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿರುವುದು ದಾಖಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಹೇಳಿಕೆ ಮತ್ತು ನಂತರ ಸೇನೆ ಬಹಿರಂಗಪಡಿಸಿದ ಆರು ಯೋಧರ ಹುತಾತ್ಮರ ಮಾಹಿತಿಯ ನಡುವೆ ಸ್ಪಷ್ಟ ವ್ಯತ್ಯಾಸವಿರುವುದರಿಂದ, ಸಂಸತ್ತಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ಕಾಂಗ್ರೆಸ್ನ ವಾದವಾಗಿದೆ.
ಸಂಸತ್ತಿನ ಸಂಪ್ರದಾಯಗಳು ಹಾಗೂ ನಿಯಮಗಳ ಪ್ರಕಾರ, ಯಾವುದೇ ಸಚಿವರು ಸದನವನ್ನು ತಪ್ಪು ದಾರಿಗೆಳೆಯುವಂತ ಮಾಹಿತಿ ನೀಡಿದರೆ ಅಥವಾ ಮಹತ್ವದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದರೆ, ಅದು ವಿಶೇಷಾಧಿಕಾರದ ಉಲ್ಲಂಘನೆ ಹಾಗೂ ಸದನದ ಅವಮಾನಕ್ಕೆ ಸಮಾನವಾಗುತ್ತದೆ ಎಂದು ಕೆ.ಸಿ. ವೇಣುಗೋಪಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ವಿಶೇಷಾಧಿಕಾರ ಉಲ್ಲಂಘನೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಲೋಕಸಭಾ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಸಂಸತ್ತು ಪ್ರಜಾಪ್ರಭುತ್ವದ ಅತ್ಯುನ್ನತ ಉತ್ತರದಾಯಿತ್ವದ ವೇದಿಕೆಯಾಗಿದ್ದು, ಸರ್ಕಾರದ ಸಚಿವರು ಸದನದ ಮುಂದೆ ಸಂಪೂರ್ಣ ಮತ್ತು ನಿಖರ ಮಾಹಿತಿಯನ್ನೇ ಮಂಡಿಸಬೇಕಾದ ಜವಾಬ್ದಾರಿ ಹೊಂದಿದ್ದಾರೆ. ಸೈನಿಕರ ಬಲಿದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದರೆ, ಅದು ಸಂಸತ್ತಿಗೆ ಮಾತ್ರವಲ್ಲದೆ ದೇಶದ ಜನರಿಗೂ ತಪ್ಪು ಮಾಹಿತಿ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.