ಮನರೇಗಾ ಬಾಕಿ ಪಾವತಿ, ಹೊಸ ಉದ್ಯೋಗ ಯೋಜನೆ ಕುರಿತು ಕೇಂದ್ರಕ್ಕೆ ಖರ್ಗೆ ಪ್ರಶ್ನೆ
ನವದೆಹಲಿ, 30 ಜೂನ್ (ಹಿ.ಸ.) : ಆ್ಯಂಕರ್ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯ ಬಾಕಿ ಹಣ ಬಿಡುಗಡೆ, ಹೊಸದಾಗಿ ಜಾರಿಯಾಗುತ್ತಿರುವ ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಖಾತರಿ ಯೋಜನೆ (ವಿಬಿ-ಜಿ ರಾಮ್ ಜಿ) ಹಾಗೂ ಗ್ರಾಮೀಣ ಉದ್ಯೋಗದ ವಿಚಾರವಾ
ಖರ್ಗೆ


ನವದೆಹಲಿ, 30 ಜೂನ್ (ಹಿ.ಸ.) :

ಆ್ಯಂಕರ್ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯ ಬಾಕಿ ಹಣ ಬಿಡುಗಡೆ, ಹೊಸದಾಗಿ ಜಾರಿಯಾಗುತ್ತಿರುವ ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಖಾತರಿ ಯೋಜನೆ (ವಿಬಿ-ಜಿ ರಾಮ್ ಜಿ) ಹಾಗೂ ಗ್ರಾಮೀಣ ಉದ್ಯೋಗದ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಖರ್ಗೆ, ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸಿದ್ದು, ರಾಜ್ಯಗಳಿಗೆ ನೀಡಬೇಕಾದ ಬಾಕಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಅಲ್ಲದೆ, ಹೊಸ ಯೋಜನೆಯ ಮೂಲಕ ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಲೋಕ ಸಭೆಯಲ್ಲಿ ನೀಡಲಾದ ಅಧಿಕೃತ ಉತ್ತರದ ಪ್ರಕಾರ, ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 17,144.13 ಕೋಟಿ ರೂಪಾಯಿ ಬಾಕಿ ಉಳಿದಿದೆ. ಇದರಲ್ಲಿ 7,846.25 ಕೋಟಿ ರೂಪಾಯಿ ಕೂಲಿ ಪಾವತಿಗೆ ಸಂಬಂಧಿಸಿದ ಬಾಕಿ ಮೊತ್ತವಾಗಿದೆ. ಕಾರ್ಮಿಕರಿಗೆ ಅವರ ಹಕ್ಕಿನ ಕೂಲಿ ಇದುವರೆಗೆ ಏಕೆ ಪಾವತಿಯಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಜುಲೈ 1ರಿಂದ ಜಾರಿಗೆ ಬರಲಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಘೋಷಣೆಯಾದರೂ, ಅನೇಕ ರಾಜ್ಯಗಳಿಗೆ ಮನರೇಗಾ ಬಾಕಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಕರ್ನಾಟಕಕ್ಕೆ ಸುಮಾರು 700 ಕೋಟಿ ರೂಪಾಯಿ, ಜಾರ್ಖಂಡ್ಗೆ ಸುಮಾರು 900 ಕೋಟಿ ರೂಪಾಯಿ ಸೇರಿದಂತೆ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೂ ಬಾಕಿ ಪಾವತಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಯೋಜನೆಯ ಕೂಲಿ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ ಹೊಸ ಯೋಜನೆಯಲ್ಲಿ ಒಟ್ಟು ವೆಚ್ಚದ 40 ಪ್ರತಿಶತವನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ. ಈ ಹಣಕಾಸು ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಹಲವು ರಾಜ್ಯಗಳು ಒತ್ತಾಯಿಸಿದ್ದು, ಕೇಂದ್ರ ಸರ್ಕಾರವು ರಾಜ್ಯಗಳ ಆತಂಕಗಳಿಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೊಸ ಯೋಜನೆಯಲ್ಲಿ 60 ದಿನಗಳವರೆಗೆ ಕೆಲಸ ಸ್ಥಗಿತಗೊಳಿಸುವ ಅವಕಾಶ ಕಲ್ಪಿಸಿರುವ ನಿಯಮದ ಮೇಲೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತರು ಹಾಗೂ ಗ್ರಾಮೀಣ ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, 125 ದಿನಗಳ ಉದ್ಯೋಗ ನೀಡುವ ಗುರಿ ಸಾಧಿಸಲು ಮಧ್ಯ ಪ್ರದೇಶ ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಖರ್ಗೆ ಹೇಳಿದ್ದಾರೆ.

ಮನರೇಗಾ ಕೂಲಿ ದರ ಹೆಚ್ಚಳದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ಕನಿಷ್ಠ ಐದು ರಾಜ್ಯಗಳು ಕೂಲಿ ದರ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಬಹುಕಾಲದಿಂದ ಮನರೇಗಾ ಕಾರ್ಮಿಕರಿಗೆ ದಿನಕ್ಕೆ 400 ರೂಪಾಯಿ ಕೂಲಿ ನೀಡುವಂತೆ ಆಗ್ರಹಿಸುತ್ತಿದ್ದು, ಕಾರ್ಮಿಕರಿಗೆ ಗೌರವಯುತ ವೇತನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಗಂಭೀರತೆ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮುಂಗಾರು ಮಳೆ ಮತ್ತು ಕೃಷಿ ಪರಿಸ್ಥಿತಿಯನ್ನು ಉಲ್ಲೇಖಿಸಿದ ಖರ್ಗೆ, ಜೂನ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದ್ದು, ಖರೀಫ್ ಬಿತ್ತನೆಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ದುರ್ಬಲಗೊಳಿಸುವುದು ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಹಾಗೂ ಬಡವರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಅವರು, ಈ ಎಲ್ಲ ವಿಷಯಗಳ ಕುರಿತು ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande