
ಕುವೈತ್ ಸಿಟಿ, 03 ಜೂನ್ (ಹಿ.ಸ.) :
ಆ್ಯಂಕರ್ : ಅಮೆರಿಕದೊಂದಿಗೆ ನಡೆಯುತ್ತಿರುವ ಶಾಂತಿ ಒಪ್ಪಂದದ ಪ್ರಯತ್ನಗಳ ನಡುವೆಯೇ ಇರಾನ್ ಕುವೈತ್ ಹಾಗೂ ಬಹರೇನ್ ಮೇಲಿನ ವಾಯುದಾಳಿಯ ಮೂಲಕ ತನ್ನ ನಿಲುವು ಸ್ಪಷ್ಟಪಡಿಸಿದೆ. ಅಮೆರಿಕದ ಆಪ್ತ ಮಿತ್ರ ರಾಷ್ಟ್ರಗಳಾದ ಕುವೈತ್ ಮತ್ತು ಬಹರೇನ್ನಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಹೊಣೆಯನ್ನು ಇರಾನ್ನ ಕ್ರಾಂತಿಕಾರಿ ರಕ್ಷಣಾ ಪಡೆ ಸ್ವೀಕರಿಸಿದೆ.
ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಸಂಘಟನೆಯ ನೆಲೆಗಳ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಆಕ್ರೋಶಗೊಂಡಿದೆ. ಈ ನಡುವೆ ಇಸ್ರೇಲ್ ದಾಳಿಗಳನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಮನವಿಯೂ ಫಲ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.
ಕುವೈತ್ನ ವಾಯು ರಕ್ಷಣಾ ವ್ಯವಸ್ಥೆಗಳು ಶತ್ರುಗಳ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಮೆರಿಕದ ಕೇಂದ್ರ ಸೇನಾ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ. ಕುವೈತ್ ಕಡೆಗೆ ಉಡಾಯಿಸಲಾದ ಎರಡು ಕ್ಷಿಪಣಿಗಳು ಗುರಿ ತಲುಪುವ ಮುನ್ನವೇ ನೆಲಕ್ಕುರುಳಿವೆ ಅಥವಾ ಮಧ್ಯದಲ್ಲೇ ಒಡೆದು ಬಿದ್ದಿವೆ. ಬಹರೇನ್ ಕಡೆಗೆ ಉಡಾಯಿಸಲಾದ ಮೂರು ಕ್ಷಿಪಣಿಗಳನ್ನು ಅಮೆರಿಕ ಹಾಗೂ ಬಹರೇನ್ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ.
ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಬಹರೇನ್ನಲ್ಲಿ ಸುರಕ್ಷತಾ ಸೈರನ್ಗಳನ್ನು ಮೊಳಗಿಸಲಾಗಿದ್ದು, ದೇಶದ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಾಗರಿಕ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಕುವೈತ್ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕ್ಷಿಪಣಿ ಅವಶೇಷಗಳು ಅಥವಾ ಅನುಮಾನಾಸ್ಪದ ವಸ್ತುಗಳನ್ನು ಮುಟ್ಟಬಾರದು ಎಂದು ಮನವಿ ಮಾಡಿದೆ.
ಇದೇ ವೇಳೆ, ಅರಬ್ ಕೊಲ್ಲಿಯಲ್ಲಿರುವ ಇರಾನ್ ಬಂದರು ಪ್ರದೇಶದತ್ತ ಸಾಗುತ್ತಿದ್ದ ಖಾಲಿ ತೈಲ ಟ್ಯಾಂಕರ್ವೊಂದರ ಮೇಲೆ ಅಮೆರಿಕದ ಯುದ್ಧವಿಮಾನ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ ಟ್ಯಾಂಕರ್ ತನ್ನ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ನಾಕಾಬಂದಿ ಜಾರಿಯಾದ ನಂತರ ಇದುವರೆಗೆ ಆರು ವಾಣಿಜ್ಯ ಹಡಗುಗಳನ್ನು ಅಮೆರಿಕದ ಪಡೆಗಳು ಕಾರ್ಯಾಚರಣೆಗೆ ಅಸಮರ್ಥಗೊಳಿಸಿದ್ದು, 122ಕ್ಕೂ ಹೆಚ್ಚು ಹಡಗುಗಳು ತಮ್ಮ ಮಾರ್ಗ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮತ್ತೊಂದೆಡೆ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದು ಮಗು ಕೂಡ ಸೇರಿದೆ. 48 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಸ್ಫೋಟಗಳಿಂದ ಸರ್ಕಾರಿ ಆಸ್ಪತ್ರೆಯ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರದೇಶದಲ್ಲಿ ಮತ್ತಷ್ಟು ಅಶಾಂತಿ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.