ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಲೆಬನಾನ್ ಸೇನಾ ಮುಖ್ಯಸ್ಥ ಸೇರಿ 12 ಮಂದಿ ಸಾವು
ಬೈರುತ್, 07 ಜೂನ್ (ಹಿ.ಸ.) : ಆ್ಯಂಕರ್ : ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಘೋಷಿಸಲಾದ ಷರತ್ತುಬದ್ಧ ಕದನ ವಿರಾಮದ ನಡುವೆಯೇ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ಸೇನೆಯ ಉನ್ನತಾಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್
Attack


ಬೈರುತ್, 07 ಜೂನ್ (ಹಿ.ಸ.) :

ಆ್ಯಂಕರ್ : ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಘೋಷಿಸಲಾದ ಷರತ್ತುಬದ್ಧ ಕದನ ವಿರಾಮದ ನಡುವೆಯೇ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ಸೇನೆಯ ಉನ್ನತಾಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಖರ್ದಾಲಿ–ನಬತೀಹ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲೆಬನಾನ್ ಸೇನೆಯ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಸೇನಾ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ರುಡಾಲ್ಫ್ ಹ್ಯಾಕೆಲ್, ಕ್ಯಾಪ್ಟನ್ ಎಲಿ ಖೌರಿ ಹಾಗೂ ಸೈನಿಕ ಹುಸೇನ್ ಘೋಜಲ್ ಮೃತಪಟ್ಟಿದ್ದಾರೆ ಎಂದು ಲೆಬನಾನ್ ಸೇನೆ ತಿಳಿಸಿದೆ. ಪಾಕಿಸ್ತಾನಕ್ಕೆ ಅಧಿಕೃತ ಭೇಟಿಗಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗಿದೆ.

ಈ ದಾಳಿಯನ್ನು ಖಂಡಿಸಿರುವ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್, ಇದು ದೇಶದ ಸಾರ್ವಭೌಮತ್ವದ ಮೇಲೆ ನಡೆದ ನೇರ ದಾಳಿ ಹಾಗೂ ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ನವಾಫ್ ಸಲಾಂ ಕೂಡ ಇದನ್ನು ಅತ್ಯಂತ ಹೇಯ ಕೃತ್ಯ ಎಂದು ಬಣ್ಣಿಸಿದ್ದು, ಮೃತರ ಕುಟುಂಬಗಳಿಗೆ ಹಾಗೂ ಲೆಬನಾನ್ ಸೇನೆಗೆ ಸಂತಾಪ ಸೂಚಿಸಿದ್ದಾರೆ.

ಇಸ್ರೇಲಿ ರಕ್ಷಣಾ ಪಡೆ ಈ ದಾಳಿ ಸಕ್ರಿಯ ಯುದ್ಧ ವಲಯದಲ್ಲಿ ನಡೆದಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಆ ಪ್ರದೇಶದಲ್ಲಿ ಸಂಚಾರ ನಡೆಸಲು ಇಸ್ರೇಲಿ ಸೇನೆಯೊಂದಿಗೆ ಪೂರ್ವಸಮನ್ವಯ ಅಗತ್ಯವಿತ್ತು ಎಂದು ಹೇಳಿದೆ.

ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆ ಈ ದಾಳಿಯನ್ನು ಘೋರ ಅಪರಾಧ ಎಂದು ಕರೆದಿದ್ದು, ಅಮೆರಿಕದ ಒತ್ತಡಕ್ಕೆ ಮಣಿದು ಲೆಬನಾನ್ ಸರ್ಕಾರ ದೇಶವನ್ನು ಮತ್ತಷ್ಟು ರಕ್ತಪಾತದತ್ತ ತಳ್ಳಿದೆ ಎಂದು ಆರೋಪಿಸಿದೆ.

ಇರಾನ್, ಸೌದಿ ಅರೇಬಿಯಾ, ಜೋರ್ಡಾನ್ ಹಾಗೂ ಕತಾರ್ ಸೇರಿದಂತೆ ಹಲವು ರಾಷ್ಟ್ರಗಳು ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಲೆಬನಾನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಅಖಂಡತೆಯ ಮೇಲೆ ನಡೆದ ಗಂಭೀರ ಉಲ್ಲಂಘನೆ ಎಂದು ಅವು ಅಭಿಪ್ರಾಯಪಟ್ಟಿವೆ. ದಕ್ಷಿಣ ಲೆಬನಾನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಕೂಡ ಈ ದಾಳಿಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1701ರ ಉಲ್ಲಂಘನೆ ಎಂದು ಹೇಳಿದೆ.

ಇದೇ ವೇಳೆ ಸಿಡೋನ್ ಜಿಲ್ಲೆಯ ಸಕ್ಸಾಕಿಯಾ ಗ್ರಾಮದಲ್ಲಿ ನಡೆದ ಮತ್ತೊಂದು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ನಬತೀಹ್ ಜಿಲ್ಲೆಯ ಡೀರ್ ಅಲ್-ಜಹ್ರಾನಿ ಪ್ರದೇಶದಲ್ಲಿ ಕಾರಿನ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಎರಡು ದಿನಗಳಲ್ಲಿ ದಕ್ಷಿಣ ಲೆಬನಾನ್ನ ಸುಮಾರು 150 ಹೆಜ್ಬೊಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಶಸ್ತ್ರಾಸ್ತ್ರ ಸಂಗ್ರಹಾಗಾರಗಳು, ನಿಯಂತ್ರಣ ಕೇಂದ್ರಗಳು, ರಾಕೆಟ್ ಉಡಾವಣಾ ತಾಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ. ಮತ್ತೊಂದೆಡೆ, ಬಿಂಟ್ ಜೆಬೈಲ್ ಪ್ರದೇಶದಲ್ಲಿನ ಇಸ್ರೇಲಿ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಹೆಜ್ಬೊಲ್ಲಾ ಹೇಳಿಕೊಂಡಿದೆ.

ಏಪ್ರಿಲ್ 17ರಿಂದ ಜಾರಿಯಲ್ಲಿರುವ ಕದನ ವಿರಾಮವನ್ನು ಉಭಯಪಕ್ಷಗಳು ಸಂಪೂರ್ಣವಾಗಿ ಪಾಲಿಸಿಲ್ಲ. ಇಸ್ರೇಲ್ ಮತ್ತು ಹೆಜ್ಬೊಲ್ಲಾ ಪರಸ್ಪರ ಕದನ ವಿರಾಮ ಉಲ್ಲಂಘನೆಯ ಆರೋಪಗಳನ್ನು ಮಾಡುತ್ತಲೇ ಬಂದಿವೆ. ಇತ್ತೀಚೆಗೆ ಘೋಷಿಸಲಾದ ಹೊಸ ಷರತ್ತುಬದ್ಧ ಕದನ ವಿರಾಮವನ್ನು ಹೆಜ್ಬೊಲ್ಲಾ ನಾಯಕ ನಯೀಮ್ ಖಾಸಿಂ ತಿರಸ್ಕರಿಸಿದ್ದು, ದಕ್ಷಿಣ ಲೆಬನಾನ್ನಿಂದ ಇಸ್ರೇಲ್ ಸಂಪೂರ್ಣ ಹಿಂತೆಗೆದ ನಂತರವೇ ಯಾವುದೇ ಒಪ್ಪಂದವನ್ನು ಒಪ್ಪಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾರ್ಚ್ 2ರಿಂದ ಆರಂಭವಾದ ಸಂಘರ್ಷದಲ್ಲಿ ಲೆಬನಾನ್ನಾದ್ಯಂತ ನಡೆದ ಇಸ್ರೇಲಿ ದಾಳಿಗಳಿಂದ ಇದುವರೆಗೆ 3,593 ಮಂದಿ ಸಾವನ್ನಪ್ಪಿದ್ದು, 10,990ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಕಳವಳ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande