
ಢಾಕಾ, 05 ಜೂನ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿ ವಿವಾದ ಮತ್ತೊಮ್ಮೆ ತೀವ್ರಗೊಂಡಿದೆ. ಭಾರತವು ಜೂನ್ 4ರಂದು 28 ಜನರನ್ನು ಬಾಂಗ್ಲಾದೇಶದ ಗಡಿಯೊಳಗೆ ತಳ್ಳಲು ಪ್ರಯತ್ನಿಸಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಈ ಪ್ರಯತ್ನವನ್ನು ತಾವು ವಿಫಲಗೊಳಿಸಿದ್ದಾಗಿ ಬಾಂಗ್ಲಾದೇಶ ಗಡಿ ರಕ್ಷಣಾ ಪಡೆ (ಬಿಜಿಬಿ) ತಿಳಿಸಿದೆ.
ಬಾಂಗ್ಲಾದೇಶದ ಪ್ರೊಥೋಮ್ ಆಲೋ ಪತ್ರಿಕೆಯ ವರದಿ ಪ್ರಕಾರ, ಚಾಪೈನವಾಬ್ಗಂಜ್ ಜಿಲ್ಲೆಯ ಗೋಮಾಸ್ತಾಪುರ ಉಪಜಿಲ್ಲೆಯ ಬಂಗಾಬಾರಿ ಗಡಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) 28 ಜನರನ್ನು ಬಾಂಗ್ಲಾದೇಶದೊಳಗೆ ಕಳುಹಿಸಲು ಯತ್ನಿಸಿತ್ತು. ಆದರೆ ಬಿಜಿಬಿ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಅದನ್ನು ತಡೆದಿದ್ದಾರೆ.
ನಾಲ್ಕು ಸಾವಿರ ಕಿಲೋಮೀಟರ್ಗಿಂತಲೂ ಹೆಚ್ಚು ಉದ್ದದ ಮತ್ತು ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿರುವ ಭಾರತ–ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿರುವ ಬಿಜಿಬಿ, ಯಾವುದೇ ಅಕ್ರಮ ನುಸುಳುವಿಕೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಬಂಗಾಬಾರಿ ಗಡಿಯಲ್ಲಿ ಬಿಜಿಬಿ ಮತ್ತು ಬಿಎಸ್ಎಫ್ ಅಧಿಕಾರಿಗಳ ನಡುವೆ ಅಧಿಕೃತ ಧ್ವಜ ಸಭೆ ನಡೆಯಿತು. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ.
ಸಭೆಯ ಬಳಿಕ ಬಿಜಿಬಿಯ 16ನೇ ಬೆಟಾಲಿಯನ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಅರಿಫುಲ್ ಇಸ್ಲಾಂ ಮಾಸುಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಬುಧವಾರ ಮುಂಜಾನೆ ಬಿಎಸ್ಎಫ್ ಸಿಬ್ಬಂದಿ 28 ಜನರನ್ನು ಬಾಂಗ್ಲಾದೇಶದೊಳಗೆ ತಳ್ಳಲು ಪ್ರಯತ್ನಿಸಿದ್ದು, ಬಿಜಿಬಿಯ ತೀವ್ರ ವಿರೋಧದಿಂದ ಅದು ವಿಫಲವಾಯಿತು ಎಂದು ಅವರು ಹೇಳಿದರು.
ಈ 28 ಮಂದಿಯಲ್ಲಿ 12 ಪುರುಷರು, 10 ಮಹಿಳೆಯರು ಮತ್ತು 6 ಮಕ್ಕಳು ಸೇರಿದ್ದಾರೆ. ಪ್ರಸ್ತುತ ಅವರು ಗಡಿಯ ಶೂನ್ಯ ರೇಖೆ (ನೋ ಮ್ಯಾನ್ಸ್ ಲ್ಯಾಂಡ್) ಪ್ರದೇಶದಲ್ಲೇ ತಂಗಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಬಾಂಗ್ಲಾದೇಶದೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜಿಬಿ ಸ್ಪಷ್ಟಪಡಿಸಿದೆ.
ಗಡಿಯ ಕೆಲವು ಪ್ರದೇಶಗಳಲ್ಲಿ ಜನರನ್ನು ತಳ್ಳುವ ಮೂಲಕ ಒಳನುಗ್ಗಿಸುವುದು ಸುಲಭವಾಗಿರುವುದರಿಂದ ಅಂತಹ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದು ಕಮಾಂಡರ್ ಆರಿಫುಲ್ ಇಸ್ಲಾಂ ತಿಳಿಸಿದ್ದಾರೆ. ಗಡಿಯಲ್ಲಿ ಈಗಾಗಲೇ ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದರು.
ಈ ಸೂಕ್ಷ್ಮ ವಿಷಯದ ಕುರಿತು ಜೂನ್ 8ರಿಂದ 11ರವರೆಗೆ ದೆಹಲಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಗಡಿ ಪಡೆಗಳ ಮಹಾನಿರ್ದೇಶಕರ ಮಟ್ಟದ ಸಭೆ ನಡೆಯಲಿದ್ದು, ಗಡಿಯಲ್ಲಿನ ಉದ್ವಿಗ್ನತೆ ತಗ್ಗಿಸುವ ಕ್ರಮಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.