ಕತಾರ್ ನಲ್ಲಿ ಕನ್ನಡ ಭಾಷೆ ಮತ್ತು ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಒತ್ತು ನೀಡಿ : ರಾಯಭಾರಿ ವಿಪುಲ್
ದೋಹಾ, 06 ಜೂನ್ (ಹಿ.ಸ.) : ಆ್ಯಂಕರ್ : ಕತಾರ್ ನ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ಅಂಗಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯು) ನ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯು ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಭಾರತದ ರಾಯಭಾರಿ ವಿಪುಲ್ ಅವರನ್ನು ರಾಯಭಾರ ಕಚೇರ
Qatar Ambassador kannada


ದೋಹಾ, 06 ಜೂನ್ (ಹಿ.ಸ.) :

ಆ್ಯಂಕರ್ : ಕತಾರ್ ನ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ಅಂಗಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯು) ನ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯು ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಭಾರತದ ರಾಯಭಾರಿ ವಿಪುಲ್ ಅವರನ್ನು ರಾಯಭಾರ ಕಚೇರಿಯಲ್ಲಿ ಸೌಜನ್ಯವಾಗಿ ಭೇಟಿ ಮಾಡಿತು.

ನೂತನ ಸಮಿತಿಯ ಅಧಿಕಾರಾವಧಿಯ ಆರಂಭದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ರಾಯಭಾರಿ ವಿಪುಲ್ ಅವರು ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರ ನಡುವೆ ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.

ಮುಂದಿನ ಪೀಳಿಗೆಯ ಮಕ್ಕಳಲ್ಲಿ ಕನ್ನಡ ಕಲಿಕೆಯ ಆಸಕ್ತಿ ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಕರ್ನಾಟಕ ಸರ್ಕಾರದ ಗಮನ ಸೆಳೆದು ಅಗತ್ಯ ಪ್ರೋತ್ಸಾಹ ಮತ್ತು ಸಾಂಸ್ಥಿಕ ನೆರವು ಪಡೆಯುವ ಪ್ರಯತ್ನಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಮಾತುಕತೆಯ ವೇಳೆ ಕತಾರ್ ನ ಸ್ಥಳೀಯ ಸಮುದಾಯದೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ರಾಯಭಾರಿ ಅವರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಸ್ಥಳೀಯ ಜನರ ನಡುವೆ ಪರಿಣಾಮಕಾರಿಯಾಗಿ ಪರಿಚಯಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.

ಇಂತಹ ಸಾಂಸ್ಕೃತಿಕ ವಿನಿಮಯಗಳು ಭಾರತ ಮತ್ತು ಕತಾರ್ ನಡುವಿನ ಸ್ನೇಹ ಹಾಗೂ ಪರಸ್ಪರ ಗೌರವದ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿವೆ ಎಂದು ಅಭಿಪ್ರಾಯಪಟ್ಟರು.

ರಾಯಭಾರಿಗಳಿಂದ ದೊರೆತ ಮಾರ್ಗದರ್ಶನಕ್ಕೆ ಕರ್ನಾಟಕ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ಸಮಿತಿಯ ಸದಸ್ಯರು ರಾಯಭಾರಿ ವಿಪುಲ್ ಅವರಿಗೆ ಸಾಂಪ್ರದಾಯಿಕ ಶಲ್ಯ ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande