ಹೆಬ್ಬಾಳ ಸುರಂಗ ಮಾರ್ಗ ಯೋಜನೆಗೆ ತೇಜಸ್ವಿ ಸೂರ್ಯ ತೀವ್ರ ವಿರೋಧ
ಬೆಂಗಳೂರು, 28 ಜೂನ್ (ಹಿ.ಸ.) : ಆ್ಯಂಕರ್ : ಹೆಬ್ಬಾಳ ಫ್ಲೈಓವರ್ನಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ನಿರ್ಮಾಣವಾಗಲಿರುವ ಮೂರು ಪಥಗಳ ಅವಳಿ ಸುರಂಗ ಮಾರ್ಗ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಮ
ತೇಜಸ್ವಿ ಸೂರ್ಯ


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ಹೆಬ್ಬಾಳ ಫ್ಲೈಓವರ್ನಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ನಿರ್ಮಾಣವಾಗಲಿರುವ ಮೂರು ಪಥಗಳ ಅವಳಿ ಸುರಂಗ ಮಾರ್ಗ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿಲ್ಲ; ಬದಲಾಗಿ ಬೆಂಗಳೂರಿನ ವೈಜ್ಞಾನಿಕ ನಗರ ಯೋಜನೆಗೆ ಸಮಾಧಿ ಶಿಲೆ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.

₹1,139 ಕೋಟಿ ವೆಚ್ಚದ ಸುಮಾರು 2 ಕಿ.ಮೀ. ಉದ್ದದ ಈ ಸುರಂಗ ಮಾರ್ಗವು ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ಸಲಹೆಗಾರರು ಸಿದ್ಧಪಡಿಸಿರುವ ವಿವರವಾದ ಯೋಜನಾ ವರದಿ (ಡಿಪಿಆರ್)ಯಲ್ಲಿಯೇ ಸುರಂಗ ಮಾರ್ಗವು ಉದ್ಘಾಟನೆಯ ಮೊದಲ ದಿನದಿಂದಲೇ ವಾಹನ ದಟ್ಟಣೆಯಿಂದ ತುಂಬಿ ತುಳುಕಲಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಯೋಜನೆಯು ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಅಲ್ಲ, ಬದಲಾಗಿ ಕೆಲವೇ ಕೆಲವು ವಿಐಪಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಶ್ರೀಮಂತ ವರ್ಗದ ಅನುಕೂಲಕ್ಕಾಗಿ ರೂಪಿಸಲಾಗಿದೆ ಎಂಬ ಅಭಿಪ್ರಾಯ ಬೆಂಗಳೂರಿನ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದ್ದಾರೆ. ಆದರೆ ಇದರ ವೆಚ್ಚವನ್ನು ತೆರಿಗೆದಾರರೇ ಭರಿಸಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.

ಸಂಚಾರ ದಟ್ಟಣೆಗೆ ಪರಿಹಾರವಾಗಿ ಸರ್ಕಾರವು ಸುರಂಗ ಮಾರ್ಗಗಳಿಗಿಂತ ರೆಡ್ ಲೈನ್ ಮೆಟ್ರೋ, ಹೆಚ್ಚಿನ ಬಿಎಂಟಿಸಿ ಬಸ್ಗಳು ಹಾಗೂ ಉಪನಗರ ರೈಲು ಯೋಜನೆಗಳನ್ನು ವೇಗಗೊಳಿಸಬೇಕಿತ್ತು ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಫ್ಲೈಓವರ್ಗಳು ಸಂಚಾರ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದ್ದು, ಸುರಂಗ ಮಾರ್ಗಗಳೂ ಅದೇ ಹಾದಿ ಹಿಡಿಯಲಿವೆ ಎಂದು ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಸಣ್ಣ ಫ್ಲೈಓವರ್ಗಳು ಸಂಚಾರ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿರುವ ತೇಜಸ್ವಿ ಸೂರ್ಯ, ಹಾಗಾದರೆ ಸಣ್ಣ ಸುರಂಗ ಮಾರ್ಗ ಹೇಗೆ ಪರಿಹಾರವಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಮುಂದೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಉದ್ದೇಶಿಸಿರುವ ದೀರ್ಘ ಸುರಂಗ ಮಾರ್ಗ ಯೋಜನೆಗೂ ತಾವು ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿರುವ ಅವರು, ಬೆಂಗಳೂರಿಗೆ ಅಗತ್ಯವಿರುವುದು ಇನ್ನಷ್ಟು ಮೆಟ್ರೋ, ಬಸ್ಗಳು, ಉತ್ತಮ ಉಪನಗರ ರೈಲು ವ್ಯವಸ್ಥೆ ಹಾಗೂ ವೈಜ್ಞಾನಿಕ ನಗರ ಯೋಜನೆಯೇ ಹೊರತು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಸುರಂಗ ಮಾರ್ಗಗಳಲ್ಲ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande