
ವಿಜಯಪುರ, 28 ಜೂನ್ (ಹಿ.ಸ.) :
ಆಂಕರ್ : ಮಳೆಯ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟ ನಿವಾರಣೆಯಾಗಲಿ, ನಾಡಿನಾದ್ಯಂತ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ ಎಂಬ ಉದ್ದೇಶದಿಂದ ವಿಜಯಪುರ ನಗರದ ಹೊರವಲಯದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ರೈತರಿಂದ ವಿಶೇಷ ಪೂಜೆ ಹಾಗೂ ಇಂದ್ರ ಹೋಮ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ದೇವರಿಗೆ ಹಾಲಿನ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ಗೋ ಪೂಜೆ ನೆರವೇರಿಸಿ, ಮಳೆ ದೇವರಾದ ಇಂದ್ರನನ್ನು ಪ್ರಾರ್ಥಿಸುವ ಉದ್ದೇಶದಿಂದ ಶಾಸ್ತ್ರೋಕ್ತವಾಗಿ ಇಂದ್ರ ಯಜ್ಞವನ್ನು ನಡೆಸಲಾಯಿತು.
ಭೂಮಂಡಲಕ್ಕೆ ಸಮೃದ್ಧ ಮಳೆಯಾಗಲಿ, ರೈತರ ಹೊಲಗಳಿಗೆ ನೀರಿನ ಕೊರತೆ ಎದುರಾಗದಿರಲಿ, ಈ ನಾಡಿನ ಸಮಸ್ತ ರೈತರು ಉತ್ತಮ ಬೆಳೆ ಪಡೆದು ಸುಖ-ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ರೈತ ಮುಖಂಡರು ಹಾಗೂ ವಿವಿಧ ಗಣ್ಯರು ಪಾಲ್ಗೊಂಡು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖಂಡರಾದ ಉಮೇಶ ಕರಜೋಳ, ಸುರೇಶ ಬಿರಾದಾರ, ಸಂದೀಪ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿರಿಯ ರೈತ ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ಸಂಗಮೇಶ ಸಗರ, ಸಾತಲಿಂಗಯ್ಯ ಸಾಲಿಮಠ, ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ವಿರೇಶ ಗೊಬ್ಬುರ, ಶಾನೂರ್ ನಂದರಗಿ, ತಿಪ್ಪಣ್ಣ ನಾಟಿಕಾರ, ಧರೆಪ್ಪ ಅನಂತಪುರ, ಶಿವರಾಜ ಕುಮಟಗಿ ಸೇರಿದಂತೆ ಅನೇಕ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೈತರ ಬದುಕಿನ ಆಧಾರವಾಗಿರುವ ಮಳೆ ಸಮೃದ್ಧವಾಗಿ ಸುರಿದು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿ ಎಂಬ ಆಶಯದೊಂದಿಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮ ಗಮನ ಸೆಳೆಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande