
ವಿಜಯಪುರ, 28 ಜೂನ್ (ಹಿ.ಸ.) :
ಆಂಕರ್ : ಕೇಂದ್ರ ಸರ್ಕಾರದ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷರಾದ ಸಂಜಯ ಪಾಟೀಲ (ಕನಮಡಿ) ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 29-06-2026 ರಿಂದ 06-07-2026ರವರೆಗೆ ಕೇಂದ್ರ ಸಹಕಾರ ಸಚಿವಾಲಯದ ಸೂಚನೆಯಂತೆ ದೇಶಾದ್ಯಂತ ಸಹಕಾರ ಸಪ್ತಾಹ ಆಚರಣೆ ನಡೆಯುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ಸಹಕಾರ ಇಲಾಖೆಯ ವತಿಯಿಂದ ವಿವಿಧ ತಾಲೂಕುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ನೇತೃತ್ವದಲ್ಲಿ ವಿಜಯಪುರ, ಸಿಂದಗಿ ಹಾಗೂ ತಾಳಿಕೋಟಿ ತಾಲೂಕುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಹಕಾರ ಸಚಿವಾಲಯ ಸ್ಥಾಪನೆಯಾದ ನಂತರ ದೇಶದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಾಥಮಿಕ ಸಹಕಾರ ಸಂಘಗಳ ಕಂಪ್ಯೂಟರೀಕರಣ, ತಂತ್ರಾಂಶದೊಂದಿಗೆ ಸಂಘಗಳ ಜೋಡಣೆ, “ಒಂದು ದೇಶ–ಒಂದು ಅಕೌಂಟಿಂಗ್ ವ್ಯವಸ್ಥೆ” ಜಾರಿಗೆ ತರುವ ಪ್ರಯತ್ನಗಳು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ದೇಶದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಪ್ರಾಥಮಿಕ ಸಹಕಾರ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. NABARD, NDDB, NFDB ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಸುಮಾರು ಎರಡು ಲಕ್ಷ ಹೊಸ ಸಹಕಾರ ಸಂಘಗಳ ರಚನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿಯೂ ಬೃಹತ್ ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದ್ದು, ರಾಷ್ಟ್ರೀಯ ಸಹಕಾರ ಎಕ್ಸ್ಪೋರ್ಟ್ ಲಿಮಿಟೆಡ್ನಂತಹ ಸಂ8ಸ್ಥೆಗಳು ಸ್ಥಾಪನೆಯಾಗಿ 2025-26ನೇ ಆರ್ಥಿಕ ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿವೆ. ಇದರಿಂದ ಸಹಕಾರ ಕ್ಷೇತ್ರದ ಸಾಮರ್ಥ್ಯ ಮತ್ತು ವ್ಯಾಪ್ತಿ ಹೆಚ್ಚಾಗಿದೆ ಎಂದು ಸಂಜಯ ಪಾಟೀಲ ಹೇಳಿದರು.
ಸಹಕಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಹೊಸ ಅವಕಾಶಗಳ ಕುರಿತು ಯುವಕರು ಮತ್ತು ಮಹಿಳೆಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಹಕಾರ ಸಪ್ತಾಹದ ಸಂದರ್ಭದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಹಕಾರ ಚಳವಳಿಯಲ್ಲಿ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಗೆ ಈ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ, ನಿರ್ದೇಶಕರಾದ ಸುರೇಶ ಬಿರಾದಾರ, ಸಿದ್ದು ಮಲ್ಲಿಕಾರ್ಜುನಮಠ, ವಿವೇಕಾನಂದ ಶಿರೋಳಕರ, ದೀಪಕ ಶಿಂತ್ರೆ, ಪರಶುರಾಮ ಚಿಂಚಲಿ, ಮುಖ್ಯ ಕಾರ್ಯನಿರ್ವಾಹಕರಾದ ಪಂಪನಗೌಡ ಹಾಗೂ ಮಹಾಲಕ್ಷ್ಮಿ ಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕರಾದ ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande