
ಬಾಗಲಕೋಟೆ, 28 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ ಕೆರೂರು ಗ್ರಾಮದಲ್ಲಿ ನಡೆಯಲಿರುವ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಯವರ 45ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ಜಾತ್ರೆಯ ಅಂಗವಾಗಿ ನಡೆಯಲಿರುವ ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮೆರವಣಿಗೆ, ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಜನಸಂದಣಿ ನಿಯಂತ್ರಣ, ವಾಹನ ಸಂಚಾರ ವ್ಯವಸ್ಥೆ, ಭದ್ರತಾ ಕ್ರಮಗಳು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಯಿತು.
ಜಾತ್ರಾ ಕಾರ್ಯಕ್ರಮಗಳು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದ್ದು, ಸಾರ್ವಜನಿಕರು ಸಹ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande