
ನವದೆಹಲಿ, 28 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಶೆಲ್ಸ್ ಗಣರಾಜ್ಯದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘ಗಾರ್ಡಿಯನ್ ಆಫ್ ದ ಬ್ಲೂ ಹೋರೈಜನ್’ ಪ್ರಶಸ್ತಿಯನ್ನು ಭಾನುವಾರ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಅವರು ಈ ಗೌರವವನ್ನು ಪ್ರಧಾನಿಗೆ ಪ್ರದಾನಿಸಿದರು.
ಪರಿಸರ ಸ್ನೇಹಿ ನಾಯಕತ್ವ, ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ವಹಿಸಿರುವ ಪಾತ್ರ, ‘ಬ್ಲೂ ಎಕಾನಮಿ’ (ಸಮುದ್ರ ಆಧಾರಿತ ಆರ್ಥಿಕತೆ), ಹವಾಮಾನ ಬದಲಾವಣೆ ವಿರುದ್ಧದ ಕ್ರಮಗಳು, ಸಮುದ್ರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಹಾಗೂ ಸಣ್ಣ ದ್ವೀಪ ರಾಷ್ಟ್ರಗಳ ಅಭಿವೃದ್ಧಿ ಆಶಯಗಳಿಗೆ ದೀರ್ಘಕಾಲದಿಂದ ನೀಡಿರುವ ಬೆಂಬಲವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಗೌರವವನ್ನು ಮೊದಲ ಬಾರಿಗೆ ಪ್ರದಾನ ಮಾಡಲಾಗಿದ್ದು, ಅದರ ಮೊದಲ ಸ್ವೀಕರಿಸುವವರಾಗಿ ಪ್ರಧಾನಿ ಮೋದಿ ಗುರುತಿಸಿಕೊಂಡಿದ್ದಾರೆ.
ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಶಸ್ತಿಯನ್ನು ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಬದ್ಧವಾಗಿರುವ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಸಮರ್ಪಿಸುವುದಾಗಿ ಹೇಳಿದರು. ಭಾರತ ಮತ್ತು ಸೆಶೆಲ್ಸ್ ರಾಜತಾಂತ್ರಿಕ ಸಂಬಂಧಗಳ 50ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ದೊರೆತಿರುವ ಈ ಗೌರವವು ಉಭಯ ದೇಶಗಳ ಸ್ನೇಹವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ತಿಳಿಸಿದರು.
ವಿದೇಶಾಂಗ ಸಚಿವಾಲಯದ ಪ್ರಕಾರ, ಹಸಿರು ಭೂಮಿಯ ನಿರ್ಮಾಣದತ್ತ ಪ್ರಧಾನಿ ಮೋದಿ ತೋರಿರುವ ನಿರಂತರ ಬದ್ಧತೆಗೆ ಈ ಪ್ರಶಸ್ತಿ ಮಾನ್ಯತೆ ನೀಡಿದೆ. ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್, ಮಿಷನ್ ಲೈಫ್, ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನ ಹಾಗೂ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ ಮೊದಲಾದ ಜಾಗತಿಕ ಉಪಕ್ರಮಗಳಲ್ಲಿ ಅವರ ನಾಯಕತ್ವಕ್ಕೆ ಇದು ಮಾನ್ಯತೆಯಾಗಿದೆ.
ಈ ಹಿಂದೆ ಪ್ರಧಾನಿಗೆ ಆಹಾರ ಮತ್ತು ಕೃಷಿ ಸಂಸ್ಥೆಯ ಅಗ್ರಿಕೋಲಾ ಪದಕ, ಸಿಯೋಲ್ ಶಾಂತಿ ಪ್ರಶಸ್ತಿ ಹಾಗೂ ಚಾಂಪಿಯನ್ ಆಫ್ ದಿ ಅರ್ಥ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗೌರವಗಳು ಲಭಿಸಿದ್ದವು. ‘ಗಾರ್ಡಿಯನ್ ಆಫ್ ದ ಬ್ಲೂ ಹೋರೈಜನ್’ ಪ್ರಶಸ್ತಿ ಆ ಸರಣಿಯ ಇತ್ತೀಚಿನ ಸೇರ್ಪಡೆಯಾಗಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಸಾಮರ್ಥ್ಯ ವೃದ್ಧಿ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಭಯ ದೇಶಗಳ ಸಾಮಾನ್ಯ ಆದ್ಯತೆಗಳನ್ನು ಮುನ್ನಡೆಸುವಲ್ಲಿ ಭಾರತದ ಪಾತ್ರದ ಮೇಲಿನ ಸೆಶೆಲ್ಸ್ನ ವಿಶ್ವಾಸವನ್ನು ಈ ಗೌರವ ಪ್ರತಿಬಿಂಬಿಸುತ್ತದೆ.
ಗಮನಾರ್ಹವಾಗಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದುವರೆಗೆ 34 ದೇಶಗಳು ತಮ್ಮ ಅತ್ಯುನ್ನತ ರಾಷ್ಟ್ರೀಯ ಗೌರವಗಳನ್ನು ನೀಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.