ಜಗತ್ತಿಗೆ ಸಮಗ್ರ ದೃಷ್ಟಿಕೋನ ನೀಡುವುದು ಭಾರತದ ಹೊಣೆ : ಡಾ. ಮೋಹನ್ ಭಾಗವತ್
ಬೆಂಗಳೂರು, 28 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಶಿಕ್ಷಣ ಮಂಡಲ (ಬಿಎಸ್ಎಂ) ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜೂನ್ 26ರಿಂದ 28ರವರೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನುಷ್ಠಾನ: ಭಾರತೀಯ ಜ್ಞಾನ ವ್ಯವಸ್ಥೆಗಳ ಸಮನ್ವಯ ಕುರಿತ ಮೂರು ದಿ
ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾಗವತ್


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಶಿಕ್ಷಣ ಮಂಡಲ (ಬಿಎಸ್ಎಂ) ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜೂನ್ 26ರಿಂದ 28ರವರೆಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನುಷ್ಠಾನ: ಭಾರತೀಯ ಜ್ಞಾನ ವ್ಯವಸ್ಥೆಗಳ ಸಮನ್ವಯ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತದ ಸಮಗ್ರ ಹಾಗೂ ಸಮನ್ವಯದ ದೃಷ್ಟಿಕೋನವೇ ಪರಿಹಾರ ನೀಡಬಲ್ಲದು ಎಂದು ಹೇಳಿದರು. ವಿಶ್ವದ ವಿವಿಧ ಚಿಂತನೆಗಳು ತಮ್ಮದೇ ಆದ ಅನುಭವಗಳ ಆಧಾರದ ಮೇಲೆ ರೂಪುಗೊಂಡಿದ್ದು, ಅವುಗಳಿಗೂ ಮಹತ್ವವಿದೆ. ಆದರೆ ಅವು ಭಾಗಶಃ ದೃಷ್ಟಿಕೋನಗಳಾಗಿದ್ದು, ಸಮಗ್ರ ಪರಿಹಾರಕ್ಕಾಗಿ ಭಾರತದ ತತ್ವಚಿಂತನೆಯನ್ನು ವಿಶ್ವ ಆಲಿಸಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಚಿಂತನೆಯ ಮೂಲತತ್ವವಾದ 'ಅನೇಕತೆ' ಎಲ್ಲ ದೃಷ್ಟಿಕೋನಗಳನ್ನೂ ಗೌರವಿಸುವುದು. ಸತ್ಯವು ಒಂದೇ ದೃಷ್ಟಿಕೋನಕ್ಕೆ ಸೀಮಿತವಲ್ಲ. ಪರಸ್ಪರ ವಾದ-ವಿವಾದಕ್ಕಿಂತ ಶಾಸ್ತ್ರಾರ್ಥ ಹಾಗೂ ವಿಚಾರ ವಿನಿಮಯದ ಮೂಲಕ ಎಲ್ಲ ಚಿಂತನೆಗಳ ಸಾರವನ್ನು ಅಳವಡಿಸಿಕೊಳ್ಳುವುದು ಭಾರತೀಯ ಪರಂಪರೆಯ ವೈಶಿಷ್ಟ್ಯವಾಗಿದೆ ಎಂದು ಅವರು ಹೇಳಿದರು.

ಭಾರತೀಯ ಶಿಕ್ಷಣ ಮಂಡಲದ ಕಾರ್ಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಭಾರತೀಯ ಮೌಲ್ಯಗಳು, ಸಂಸ್ಕೃತಿ ಹಾಗೂ ಮಾನವಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಾಗರಿಕತೆಯ ಧ್ಯೇಯದ ಭಾಗವಾಗಿದೆ. ಕೇವಲ ಉದ್ಯೋಗ ಅಥವಾ ಆರ್ಥಿಕ ಲಾಭವನ್ನಷ್ಟೇ ಶಿಕ್ಷಣದ ಗುರಿಯನ್ನಾಗಿಸದೆ, ಮಾನವನ ಸಮಗ್ರ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ರೂಪಿಸುವ ದಿಸೆಯಲ್ಲಿ ಬಿಎಸ್ಎಂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬಿಎಸ್ಎಂ ಯಾವುದೇ ರಾಜಕೀಯ ಪಕ್ಷದ ಅಂಗಸಂಸ್ಥೆಯಲ್ಲ. ಶಿಕ್ಷಣ ಕ್ಷೇತ್ರದಂತಹ ಕಾರ್ಯಗಳು ರಾಜಕೀಯ ಪಕ್ಷಗಳ ಮಿತಿಗಳನ್ನು ಮೀರಿ ಸ್ವತಂತ್ರವಾಗಿ ನಡೆಯಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ರಾಜಕೀಯದಿಂದ ಪ್ರತ್ಯೇಕವಾಗಿಯೇ ನಡೆಸಲಾಗುತ್ತಿತ್ತು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲದ ನೂತನ ವೆಬ್ಸೈಟ್ ಅನ್ನು ಡಾ. ಮೋಹನ್ ಭಾಗವತ್ ಉದ್ಘಾಟಿಸಿದರು. ಈ ಮೂಲಕ ಭಾರತೀಯ ಶಿಕ್ಷಣದ ದೃಷ್ಟಿಕೋನವನ್ನು ಶಿಕ್ಷಕರು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಇನ್ನಷ್ಟು ವ್ಯಾಪಕವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತ ಅಧ್ಯಕ್ಷ ಡಾ. ಸಚ್ಚಿದಾನಂದ ಜೋಶಿ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಡಾ. ಭಾರತಶರಣ್ ಸಿಂಗ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 380ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande