
ನವದೆಹಲಿ, 28 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ 'ಮನದ ಮಾತು' 135ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ರಕ್ಷಣಾ ಕ್ಷೇತ್ರ, ವಿಮಾನಯಾನ, ಯೋಗ, ಸಾಮಾಜಿಕ ಭದ್ರತೆ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆ ಮತ್ತು ಜನಭಾಗವಹಿಸುವಿಕೆ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದರು.
ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಗಳು ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿ ನೀಡುತ್ತಿವೆ ಎಂದರು.
ಪ್ರಧಾನಿ ಅವರು, 2026ರ ಮೊದಲ ಆರು ತಿಂಗಳಲ್ಲಿ ಭಾರತ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ವಿಶೇಷವಾಗಿ ಜೂನ್ ತಿಂಗಳು ರಕ್ಷಣಾ ಸಾಮರ್ಥ್ಯ, ತಾಂತ್ರಿಕ ಪ್ರಗತಿ, ಸಾಮಾಜಿಕ ಜಾಗೃತಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಮತ್ತಷ್ಟು ಬಲಪಡಿಸಿದ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಮತ್ತಷ್ಟು ಬಲ
ಪಶ್ಚಿಮ ಏಷ್ಯಾದ ಯುದ್ಧಸಮಾನ ಪರಿಸ್ಥಿತಿಯ ನಡುವೆಯೂ ದೇಶದ ಜನರು ತೋರಿದ ಜವಾಬ್ದಾರಿ ಮತ್ತು ರಾಷ್ಟ್ರೀಯ ಏಕತೆ ಶ್ಲಾಘನೀಯವಾಗಿದೆ ಎಂದು ಪ್ರಧಾನಿ ಹೇಳಿದರು. ಚಿನ್ನದ ಖರೀದಿ ನಿಯಂತ್ರಿಸುವುದು, ವಿದೇಶ ಪ್ರವಾಸ ಮುಂದೂಡುವುದು, ಕಾರ್ಪೂಲಿಂಗ್ ಅಳವಡಿಸಿಕೊಳ್ಳುವುದು ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವಂತೆ ಮಾಡಿದ ಮನವಿಗೆ ಜನರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.
ಇತ್ತೀಚೆಗೆ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೆ ಹಡಗುಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಇವುಗಳ ವಿನ್ಯಾಸದಿಂದ ನಿರ್ಮಾಣದವರೆಗೆ ಎಲ್ಲವೂ ಭಾರತದಲ್ಲಿಯೇ ನಡೆದಿರುವುದು ಆತ್ಮನಿರ್ಭರ ಭಾರತದ ಸಂಕೇತವಾಗಿದೆ ಎಂದು ಹೇಳಿದರು.
'ಮೇಡ್ ಇನ್ ಇಂಡಿಯಾ' ಸಿ-295 ಮೊದಲ ಯಶಸ್ವಿ ಹಾರಾಟ
ಜೂನ್ ತಿಂಗಳಲ್ಲಿ ಭಾರತದಲ್ಲಿ ನಿರ್ಮಿತ ಸಿ-295 ಸಾರಿಗೆ ವಿಮಾನ ಮೊದಲ ಯಶಸ್ವಿ ಹಾರಾಟ ನಡೆಸಿರುವುದನ್ನು ಪ್ರಧಾನಿ ಉಲ್ಲೇಖಿಸಿದರು. ಇಂತಹ 40 ವಿಮಾನಗಳು ಭಾರತದಲ್ಲಿಯೇ ನಿರ್ಮಾಣವಾಗುತ್ತಿದ್ದು, ಇದರಿಂದ ಎಂಎಸ್ಎಂಇ, ಏರೋಸ್ಪೇಸ್ ಕೈಗಾರಿಕೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
ಇದೇ ಅವಧಿಯಲ್ಲಿ ಡಿ ಆರ್ ಡಿ ಒ ಸ್ವದೇಶಿ ದೀರ್ಘಶ್ರೇಣಿಯ ಭೂಆಕ್ರಮಣ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿರುವುದೂ ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದರು.
ಯೋಗಕ್ಕೆ ಜಾಗತಿಕ ಮನ್ನಣೆ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಶ್ವದ 2,500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆದಿದ್ದು, ಭಾರತ ಸೇರಿದಂತೆ ಕೋಟ್ಯಂತರ ಜನರು ಭಾಗವಹಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಯೋಗವು ಇಂದು ಭಾರತದ ಸಂಪ್ರದಾಯ ಮಾತ್ರವಲ್ಲ, ಜಾಗತಿಕ ಜೀವನಶೈಲಿಯ ಭಾಗವಾಗಿದೆ ಎಂದರು.
ಅಹಮದಾಬಾದ್ನಲ್ಲಿ ನಡೆದ ವಿಶ್ವ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಭಾರತ 114 ಪದಕಗಳನ್ನು, ಅವುಗಳಲ್ಲಿ 102 ಚಿನ್ನದ ಪದಕಗಳನ್ನು ಗೆದ್ದಿರುವುದನ್ನು ಅವರು ಶ್ಲಾಘಿಸಿದರು.
ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆ
ಮೆಘಾಲಯದ ಜೀವಂತ ಬೇರು ಸೇತುವೆಗಳು ಪ್ರಕೃತಿ ಮತ್ತು ಮಾನವನ ಸಹಜ ಸಹಬಾಳ್ವೆಯ ಅತ್ಯುತ್ತಮ ಉದಾಹರಣೆಯಾಗಿದ್ದು, ಅವುಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಭಾರತ ಅರ್ಜಿ ಸಲ್ಲಿಸಿದೆ ಎಂದು ಪ್ರಧಾನಿ ತಿಳಿಸಿದರು.
ಅಲ್ಲದೆ ಅಸ್ಸಾಂನಲ್ಲಿ ಅಪರೂಪದ ಹರಗಿಲಾ ಪಕ್ಷಿ ಸಂರಕ್ಷಣೆಯಲ್ಲಿ ಜೀವಶಾಸ್ತ್ರಜ್ಞೆ ಪೂರ್ಣಿಮಾ ದೇವಿ ಬರ್ಮನ್ ಮತ್ತು ಸಾವಿರಾರು ಮಹಿಳೆಯರ ಕೊಡುಗೆಯನ್ನು ಅವರು ಶ್ಲಾಘಿಸಿದರು.
ಸಾಮಾಜಿಕ ಭದ್ರತೆ ಮತ್ತು ಜನಕಲ್ಯಾಣ
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಒಂದು ಕುಟುಂಬ ಮದುವೆ ಸಮಾರಂಭದ ಸಂದರ್ಭದಲ್ಲಿ 3,500 ಗ್ರಾಮಸ್ಥರಿಗೆ ಅಪಘಾತ ವಿಮೆ ಒದಗಿಸಿರುವುದನ್ನು ಪ್ರಧಾನಿ ಮಾದರಿ ಸಾಮಾಜಿಕ ಸೇವೆ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ವಾರ್ಷಿಕ ₹20 ಪ್ರೀಮಿಯಂಗೆ ₹2 ಲಕ್ಷದವರೆಗೆ ಅಪಘಾತ ವಿಮೆ ದೊರೆಯುತ್ತಿದ್ದು, ಇದುವರೆಗೆ 58 ಕೋಟಿಗೂ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಹಾಗೆಯೇ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮೂಲಕ ₹436 ವಾರ್ಷಿಕ ಪ್ರೀಮಿಯಂಗೆ ₹2 ಲಕ್ಷ ಜೀವ ವಿಮೆ ಸೌಲಭ್ಯ ದೊರೆಯುತ್ತಿದ್ದು, 27 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಕ್ರೀಡೆ, ಶಿಕ್ಷಣ ಮತ್ತು ತಂತ್ರಜ್ಞಾನ
ನಾಗಾಲ್ಯಾಂಡ್ನಲ್ಲಿ ಮಕ್ಕಳಿಗಾಗಿ ಆರಂಭಿಸಿರುವ ಫುಟ್ಬಾಲ್ ಲೀಗ್ ಹಾಗೂ ಮಹಿಳಾ ಫುಟ್ಸಲ್ ಲೀಗ್ ಯುವ ಪ್ರತಿಭೆಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು.
ನಾಲಂದಾ ವಿಶ್ವವಿದ್ಯಾಲಯ ಪ್ರಾಚೀನ ಶಾಸ್ತ್ರಾರ್ಥ ಪರಂಪರೆಯನ್ನು ಪುನರುಜ್ಜೀವನಗೊಳಿಸಿರುವುದನ್ನು ಅವರು ಶ್ಲಾಘಿಸಿದರು. ಜೊತೆಗೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ನಲ್ಲಿ ಬಿ.ಟೆಕ್ ಕೋರ್ಸ್ ಆರಂಭಿಸಿರುವುದು ಭಾರತೀಯ ಭಾಷೆಗಳು ಮತ್ತು ಪ್ರಾಚೀನ ಜ್ಞಾನವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಲು ನೆರವಾಗಲಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ
ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ಮಹಿಳೆಯರು ಪ್ಲಾಸ್ಟಿಕ್ ತ್ಯಾಜ್ಯವನ್ನು ಇಕೋ-ಬ್ರಿಕ್ಸ್ ಆಗಿ ಪರಿವರ್ತಿಸಿ ಪರಿಸರ ಸಂರಕ್ಷಣೆಗೆ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.
ಮುಂಬರುವ ಗಣೇಶೋತ್ಸವದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವಂತೆ ಹಾಗೂ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಾದ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಅವರು ಕರೆ ನೀಡಿದರು. ಇದೇ ವೇಳೆ 'ಕ್ಯಾಚ್ ದ ರೇನ್' ಅಭಿಯಾನವನ್ನು ಮತ್ತಷ್ಟು ಬಲಪಡಿಸಿ, ಮಳೆನೀರಿನ ಪ್ರತಿಯೊಂದು ಹನಿಯನ್ನು ಸಂರಕ್ಷಿಸುವಂತೆ ದೇಶದ ಜನತೆಗೆ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.