ವಿಬಿ-ಜಿ ರಾಮ್ ಜೀ ಯೋಜನೆಗೆ ರಾಜ್ಯಗಳಿಂದ ಆಕ್ಷೇಪ ; ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ನವದೆಹಲಿ, 28 ಜೂನ್ (ಹಿ.ಸ.) : ಆ್ಯಂಕರ್ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಗೆ ಬದಲಿಯಾಗಿ ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಖಾತರಿ ಯೋಜನೆ (ವಿಬಿ-ಜಿ ರಾಮ್ ಜೀ) ಕುರಿತು ಹಲವು ರಾಜ್ಯಗಳು ಗಂಭೀರ ಆಕ್ಷೇಪ
ಜೈರಾಮ್ ರಮೇಶ್


ನವದೆಹಲಿ, 28 ಜೂನ್ (ಹಿ.ಸ.) :

ಆ್ಯಂಕರ್ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಗೆ ಬದಲಿಯಾಗಿ ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಖಾತರಿ ಯೋಜನೆ (ವಿಬಿ-ಜಿ ರಾಮ್ ಜೀ) ಕುರಿತು ಹಲವು ರಾಜ್ಯಗಳು ಗಂಭೀರ ಆಕ್ಷೇಪ ವ್ಯಕ್ತಪಡಿಸಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರಾಖಂಡ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳೂ ಸಹ ಹೊಸ ಯೋಜನೆಯಿಂದ ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿವೆ ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿ ಸಚಿವರ ತವರು ರಾಜ್ಯವೂ ಸಹ ಈ ಯೋಜನೆ ಕುರಿತು ಕಳವಳ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದರು. ಗ್ರಾಮೀಣ ಅಭಿವೃದ್ಧಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ, ರಾಜ್ಯ ಸರ್ಕಾರಗಳು ಹಾಗೂ ಇತರ ಹಿತಾಸಕ್ತಿಪಕ್ಷಗಳೊಂದಿಗೆ ಸಮರ್ಪಕ ಸಮಾಲೋಚನೆ ನಡೆಸದೆ ಮನರೇಗಾವನ್ನು ರದ್ದುಗೊಳಿಸುವ ಸಂಬಂಧದ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದೆ ಎಂದು ಆರೋಪಿಸಿದರು.

ಹೊಸ ವ್ಯವಸ್ಥೆಯಡಿ ರಾಜ್ಯಗಳ ಆರ್ಥಿಕ ಪಾಲುದಾರಿಕೆ ಹೆಚ್ಚಾಗುವುದರಿಂದ ಅವುಗಳ ಬಜೆಟ್ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ ಎಂದು ಜೈರಾಮ್ ರಮೇಶ್ ಹೇಳಿದರು.

ಇದರ ಜೊತೆಗೆ, ಕೃಷಿಯ ಗರಿಷ್ಠ ಚಟುವಟಿಕೆಯ ಅವಧಿಯಲ್ಲಿ ಉದ್ಯೋಗ ನೀಡದಿರುವ ಪ್ರಸ್ತಾವಿತ ಬ್ಲ್ಯಾಕ್ಔಟ್ ಅವಧಿಗೆ ನಾಲ್ಕು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಇದರಿಂದ ಗ್ರಾಮೀಣ ಕಾರ್ಮಿಕರು ಮತ್ತು ರೈತರಿಗೆ ತೊಂದರೆಯಾಗಲಿದೆ ಎಂದು ಅವರು ಹೇಳಿದರು.

ಕನಿಷ್ಠ ಐದು ರಾಜ್ಯಗಳು ಗ್ರಾಮೀಣ ಕಾರ್ಮಿಕರ ಕೂಲಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿವೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಸಮರ್ಪಕ ಆದಾಯ ದೊರೆಯಬೇಕೆಂಬುದು ರಾಜ್ಯಗಳ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

ಜುಲೈ 1ರಿಂದ ಮನರೇಗಾ ಬದಲಿಗೆ ಜಾರಿಗೆ ಬರಲಿರುವ ವಿಬಿ-ಜಿ ರಾಮ್ ಜೀ ಯೋಜನೆಯಿಂದ ರಾಜ್ಯಗಳಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ಆರೋಪಿಸಿದ ಜೈರಾಮ್ ರಮೇಶ್, ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತರಿ ನೀಡುತ್ತಿದ್ದ ಮನರೇಗಾವನ್ನು ರಾಜಕೀಯ ದ್ವೇಷ ಮತ್ತು ಪ್ರತೀಕಾರದ ಮನೋಭಾವದಿಂದ ರದ್ದುಪಡಿಸಲಾಗಿದೆ ಎಂದು ಟೀಕಿಸಿದರು.

ಗ್ರಾಮೀಣ ಉದ್ಯೋಗ ಹಾಗೂ ಜೀವನೋಪಾಯ ಭದ್ರತೆಗೆ ಸಂಬಂಧಿಸಿದಂತಹ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುವ ಮೊದಲು ವ್ಯಾಪಕ ಚರ್ಚೆ, ಸಂಸತ್ತಿನ ಸಮಗ್ರ ಪರಿಶೀಲನೆ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಒಮ್ಮತ ಸಾಧಿಸುವುದು ಅಗತ್ಯವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande