
ಕೋಲಾರ ಜೂನ್ ೨೭ (ಹಿ.ಸ) :
ಆ್ಯಂಕರ್ : ಯಾವುದೇ ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಲು ಪದವಿ ಕೇವಲ ಒಂದು ಅರ್ಹತೆಯಷ್ಟೇ. ಪದವಿಯ ಅಂಕಗಳನ್ನು ಸರ್ಕಾರಿ ಉದ್ಯೋಗದ ಆಯ್ಕೆಗೆ ಪರಿಗಣಿಸುವುದಿಲ್ಲ. ಆದ್ದರಿಂದ ಖಾಸಗಿ ಕಾಲೇಜುಗಳಿಗೆ ಸೇರಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಬದಲು, ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆಯುವುದು ಅತ್ಯಂತ ಅನುಕೂಲಕರ, ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎ. ಮುನಿಶಾಮಪ್ಪ ತಿಳಿಸಿದರು.
ನಗರದ ಎಕ್ಸಲೆಂಟ್ ಐಎಎಸ್ ಹಾಗೂ ಕೆಎಎಸ್ ಕೋಚಿಂಗ್ ಸೆಂಟರ್ನಲ್ಲಿ ೫೧೭ನೇ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳಿಗೆ ಉಚಿತ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಕಾಲೇಜುಗಳಿಗೆ ಅನಗತ್ಯವಾಗಿ ಖರ್ಚು ಮಾಡುವ ಹಣವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಕೊಳ್ಳಲು ಬಳಸಿ, ನಿಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಿ. ಸ್ಪರ್ಧಾರ್ಥಿಗಳಿಗೆ ಆಸಕ್ತಿ, ಕುತೂಹಲ ಮತ್ತು ಕಠಿಣ ಪರಿಶ್ರಮ ಬಹಳ ಮುಖ್ಯ, ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎನ್. ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದಿದರೆ ಖಂಡಿತವಾಗಿಯೂ ಅದಕ್ಕೆ ತಕ್ಕ ಪ್ರತಿಫಲ ಮತ್ತು ಯಶಸ್ಸು ಸಿಗುತ್ತದೆ, ಎಂದು ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಆರ್. ಲಕ್ಷ್ಮಿನಾರಾಯಣ್ ಮಾತನಾಡಿ, ನಮ್ಮ ಸಂಸ್ಥೆಯಿ0ದ ಇದುವರೆಗೆ ೮೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಈಗಾಗಲೇ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕೋಚಿಂಗ್ ಶುಲ್ಕದಲ್ಲಿ ಶೇಕಡ ೪೦ರಷ್ಟು ರಿಯಾಯಿತಿ ನೀಡಲಾಗುವುದು, ಎಂದು ಪ್ರಕಟಿಸಿದರು. ಈ ಸುವರ್ಣ ಅವಕಾಶವನ್ನು ಎಲ್ಲಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಜಿ. ಅಂಬರೀಶ್ ಮತ್ತು ಶ್ರೀಮತಿ ಲಕ್ಷ್ಮಿ ಅವರು ಉಪಸ್ಥಿತರಿದ್ದರು. ರಂಗಪ್ಪ ಅವರು ಕಾರ್ಯಕ್ರಮದ ಸ್ವಾಗತ ಕೋರಿ, ಹರ್ಷ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್