
ಕೋಲಾರ ೨೭ ಜೂನ್ (ಹಿ.ಸ) :
ಆ್ಯಂಕರ್ : ಕೆಂಪೇಗೌಡರು ಕಟ್ಟಿದ ಬೆಂಗಳೂರು ಇದೀಗ ವಿಶ್ವಕ್ಕೆ ಮಾದರಿಯಾಗಿದೆ. ಬೆಂಗಳೂರು ಅಂತರಾಷ್ಟಿಯ ಖ್ಯಾತಿಯಾಗಿದೆ. ಪ್ರಪಂಚದ ಭೂಪಟದಲ್ಲಿ ಬೆಂಗಳೂರನ್ನು ಗುರ್ತಿಸಲಾಗಿದೆ. ಭಾರತ ಅಲ್ಲದೆ ವಿಶ್ವದ ಬೇರೆ ಬೇರೆ ಜನರು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬೆಂಗಳೂರು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಅವರ ದೂರದೃಷ್ಟಿಯಿಂದಲೇ ನಾಡಿನ ಜನ ನೆಮ್ಮದಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನ0ದನಾಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂದಿ0ದ ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಬೆಂಗಳೂರು ಹೀಗೆ ಇರಬೇಕು ಎಂಬ ಅಲೋಚನೆಯಿಂತೆ ನಿರ್ಮಾಣ ಮಾಡಿದ್ದಾರೆ. ವ್ಯಾಪಾರ ಕೇಂದ್ರವಾಗಿ ಶುರುವಾದ ಬೆಂಗಳೂರು, ಐಟಿಬಿಟಿಯ ನೆಲೆಯಾಗಿದೆ. ಕೆಂಪೇಗೌಡರು ೫೦೦ ವರ್ಷಗಳ ಹಿಂದೆಯೇ ಬೆಂಗಳೂರುಯಾವ ರೀತಿ ಬೆಳೆಯಬೇಕೆಂದು ಕನಸು ಕಂಡಿದ್ದರು. ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬಹುದು ಎಂದು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದು ಕೋಲಾರ. ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ರೈತರನ್ನು ಕೋಲಾರಕ್ಕೆ ಕರೆಸಿರುವುದು ನಮ್ಮ ಹೆಮ್ಮೆಯಾಗಿದೆ. ನೆಲ, ಜಲ ಶಿಕ್ಷಣ ಕ್ಷೇತ್ರದಲ್ಲಿ ಆದ್ಯತೆಯನ್ನು ನೀಡಿದ್ದಾರೆ. ಆದ್ದರಿಂದ ಸಮುದಾಯವು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಅವರ ಸೇವೆಯನ್ನು ಸ್ಮರಿಸುವಂತಾಗಬೇಕು. ಆಮೂಲಕ ಸಮುದಾಯವರು ಸಂಟಿತರಾಗಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವಕೀಲರಾದ ಕೆ.ವಿ. ಶಂಕರಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಡಳಿತಗಾರರಲ್ಲ. ಅವರು ಎಲ್ಲಾ ಸಮುದಾಯಗಳ ಹಾಗೂ ಎಲ್ಲಾ ರಂಗಗಳ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ. ಅವರ ಆದರ್ಶಗಳು ನಮಗೆ ಸದಾ ದಾರಿ ದೀಪ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಕಾರ್ಯಕ್ರಮದ ನಂತರ ಗಣ್ಯರು ಹಸಿರು ನಿಶಾನೆ ತೋರುವ ಮೂಲಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ನೂರಾರು ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆಯು ಕೆಂಪೇಗೌಡರ ೫೧೭ನೇ ಜಯಂತಿಯ ವೈಭವಕ್ಕೆ ಸಾಕ್ಷಿಯಾಯಿತು. ಮೆರವಣಿಗೆಯಲ್ಲಿ ರೈತರಿಂದ ವಿಶೇಷ ನೃತ್ಯ, ಡೊಳ್ಳು ಕುಣಿತ ಹಾಗೂ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆದವು. ಯುವಕರು ತಮಟೆಯ ಸದ್ದಿಗೆ ಮನಸೋತು ಕುಣಿದು ಕುಪ್ಪಳಿಸಿದರು.ಉತ್ಸವದ ಸಡಗರವನ್ನು ಹೆಚ್ಚಿಸಲು ಹಾಸನ ಜಿಲ್ಲೆಯ ಅರಸೀಕೆರೆಯಿಂದ ವಿಶೇಷವಾಗಿ ರೈತರ ಕಲಾತಂಡವನ್ನು ಕರೆಸಲಾಗಿತ್ತು. ಮೆರವಣಿಗೆ ಯುದ್ದಕ್ಕೂ ನಡೆದ ಇವರ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಎಲ್ಲರ ಮನಗೆದ್ದಿತು.
ಹಬ್ಬದ ವಾತಾವರಣ ನಿರ್ಮಾಣವಾಗಿದ್ದರಿಂದ, ಮೆರವಣಿಗೆಯ ಮಾರ್ಗದುದ್ದಕ್ಕೂ ದಾನಿಗಳು ಸಾರ್ವಜನಿಕರಿಗೆ ಅನ್ನದಾನ, ಮಜ್ಜಿಗೆ ಹಾಗೂ ಪಾನಕ ವಿತರಿಸಿ ಸತ್ಕರಿಸಿದರು. ಸಾಂಪ್ರದಾಯಿಕ ಎತ್ತಿನಗಾಡಿಗಳನ್ನು ಮೆರವಣಿಗೆಯಲ್ಲಿ ಬಳಸಿದ್ದು ಈ ಬಾರಿಯ ಉತ್ಸವದ ಪ್ರಮುಖ ವಿಶೇಷವಾಗಿತ್ತು. ಆದರೆ, ಜನರ ಸಡಗರ ಮತ್ತು ಮೆರವಣಿಗೆಯ ಭಾರಿ ಶಬ್ದದ ನಡುವೆ ಗಾಡಿಗಳಿಗೆ ಕಟ್ಟಲಾಗಿದ್ದ ಎತ್ತುಗಳು ಕೆಲಕಾಲ ಗಾಬರಿಗೊಂಡ ಘಟನೆಯೂ ನಡೆಯಿತು.
ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಭವ್ಯ ಮೆರವಣಿಗೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಯಿತು. ಬಂಗಾರಪೇಟೆ ವೃತ್ತದಿಂದ ಮಹಾತ್ಮ ಗಾಂಧಿ ರಸ್ತೆ ಹಾಗೂ ರಂಗಮAದಿರ ರಸ್ತೆಯುದ್ದಕ್ಕೂ ಸಮುದಾಯದ ಯುವಕರು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು. ಒಟ್ಟಾರೆಯಾಗಿ ಇಡೀ ಕೋಲಾರ ನಗರವು ಕೆಂಪೇಗೌಡ ಜಯಂತಿಯ ಭಕ್ತಿ ಮತ್ತು ಸಾಂಸ್ಕೃತಿಕ ಸಂಭ್ರಮದಲ್ಲಿ ಮುಳುಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಮಾಜಿ ಸದಸ್ಯ ಇಂಚರ ಗೋವಿಂದರಾಜು, ಡಿಐಜಿಪಿ ಡಿ.ದೇವರಾಜ್, ಒಕ್ಕಲಿಗ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿಸಪ್ಪಗೌಡ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೋಮುಲ್ ನಿರ್ದೇಶಕರಾದ ಚೆಲುವನಹಳ್ಳಿ ನಾಗರಾಜ್, ಚಂಜಿಮಲೆ ರಮೇಶ್, ಜೆಡಿಎಸ್ ಮುಖಂಡ ಸಿಎಂಆರ್. ಶ್ರೀನಾಥ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಲಕ್ಷ್ಮಣ್ ಗೌಡ, ಡಾ.ರಮೇಶ್, ಕುರ್ಕಿ ರಾಜೇಶ್ವರಿ ಖಾಜಿಕಲ್ಲಹಳ್ಳಿ ಮುನಿರಾಜು, ಕೃಷ್ಣಾರೆಡ್ಡಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪಾಲಾಕ್ಷಗೌಡ, ಖಾಜಿಕಲ್ಲಹಳ್ಳಿ ಹರೀಷ್, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ತಹಶೀಲ್ದಾರ್ ಶ್ರೀನಿವಾಸ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್