
ಬೆಂಗಳೂರು, 27 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ರಾಜ್ಯ ಸರ್ಕಾರವು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಿತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಉಪಸ್ಥಿತರಿದ್ದರು. ಬಳಿಕ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣವಾಗಿರುವ ಥೀಮ್ ಪಾರ್ಕ್ ವೀಕ್ಷಿಸಿದ ಮುಖ್ಯಮಂತ್ರಿ, ಕೆಂಪೇಗೌಡರ ಆದರ್ಶಗಳು ಹಾಗೂ ಬೆಂಗಳೂರಿನ ಭವಿಷ್ಯದ ಅಭಿವೃದ್ಧಿ ಕುರಿತು ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.
ಮುಖ್ಯಮಂತ್ರಿ ಮಾತನಾಡಿ, ನಾಡಿನ ಸಮಸ್ತ ಜನತೆಗೆ ಕೆಂಪೇಗೌಡ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ದೂರದೃಷ್ಟಿಯ ಮಹಾನ್ ಚೇತನರಾದ ಕೆಂಪೇಗೌಡರನ್ನು ಸ್ಮರಿಸುವ ಭಾಗ್ಯ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಅವರ ಚಿಂತನೆ, ಆಚಾರ ಮತ್ತು ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ 15 ಲಕ್ಷ ಸಸಿಗಳ ನೆಡುವ ಅಭಿಯಾನ ಹಾಗೂ ಮಾಗಡಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಪೇಗೌಡರ ಕೋಟೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಸಮಾಧಿಯ ಸುತ್ತಮುತ್ತ 10 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ಐದೂವರೆ ಎಕರೆ ಜಮೀನನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರುಗೆ ಆಗಮಿಸುವ ಪ್ರತಿಯೊಬ್ಬರೂ ನಾಡಪ್ರಭು ಕೆಂಪೇಗೌಡರ ಇತಿಹಾಸ ಮತ್ತು ಕೊಡುಗೆಯನ್ನು ಅರಿಯುವಂತೆ ವಿಶೇಷ ಕಾರ್ಯಯೋಜನೆ ರೂಪಿಸಲು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಟ್ರಂಪೆಟ್ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೆಂಪೇಗೌಡರ ಕುರಿತು ಮಾಹಿತಿ ಒದಗಿಸುವ ವ್ಯವಸ್ಥೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಪ್ರಾಧಿಕಾರ ಸರ್ಕಾರಕ್ಕೆ ಸಮಗ್ರ ಯೋಜನೆ ಸಲ್ಲಿಸಲಿದೆ ಎಂದು ತಿಳಿಸಿದರು.
ಕಳೆದ ವರ್ಷ ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಲಾಗಿದ್ದು, ಅಲ್ಲಿಯೇ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪನೆಗೂ ಮಾರ್ಗದರ್ಶನ ನೀಡಲಾಗಿದೆ ಎಂದರು.
ಹಿಂದಿನ ಸರ್ಕಾರ ನಿರ್ಮಿಸಿರುವ 108 ಅಡಿ ಪ್ರತಿಮೆ ಅತ್ಯುತ್ತಮವಾಗಿದ್ದರೂ, ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಅದು ಸ್ಪಷ್ಟವಾಗಿ ಕಾಣದಿರುವ ಹಿನ್ನೆಲೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಪ್ರತಿಮೆ ಸುತ್ತಲಿನ ಥೀಮ್ ಪಾರ್ಕ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಹಸಿರು ವಾತಾವರಣ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಅದನ್ನು ಉದ್ಘಾಟಿಸಲಾಗುವುದು. ಈ ಥೀಮ್ ಪಾರ್ಕ್ನ ನಿರ್ವಹಣೆಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವೇ ವಹಿಸಿಕೊಳ್ಳಲು ಒಪ್ಪಿಗೆ ನೀಡಿರುವುದಕ್ಕೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.
ಇನ್ನು ಮುಂದೆ ಕೆಂಪೇಗೌಡ ಜಯಂತಿಯನ್ನು ಕೇವಲ ವಿಧಾನಸೌಧದ ಆವರಣಕ್ಕೆ ಸೀಮಿತಗೊಳಿಸದೆ, ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸರದಿ ಕ್ರಮವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ವರ್ಷ ಯಶವಂತಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ವರ್ಷ ಬ್ಯಾಟರಾಯನಪುರ, ಯಲಹಂಕ, ಕೆ.ಆರ್.ಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಆಚರಣೆ ನಡೆಯಲಿದೆ. ಮುಂದಿನ 28 ವರ್ಷಗಳ ಕಾಲ ಪ್ರತಿವರ್ಷ ಒಂದೊಂದು ಕ್ಷೇತ್ರದಲ್ಲಿ ಜಯಂತಿ ನಡೆಸುವ ಯೋಜನೆ ರೂಪಿಸಲಾಗಿದೆ. ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳು ಹಾಗೂ ವಾರ್ಡ್ ಮಟ್ಟದಲ್ಲೂ ಕೆಂಪೇಗೌಡ ಜಯಂತಿ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನ ದಟ್ಟಣೆ ಕುರಿತು ಉಲ್ಲೇಖಿಸಿದ ಮುಖ್ಯಮಂತ್ರಿ, ನಗರದಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆ ಹಾಗೂ 1.30 ಕೋಟಿ ವಾಹನಗಳಿವೆ ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ಮುಂದಿನ ಒಂದು ವರ್ಷದೊಳಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಜೊತೆಗೆ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 500 ಕಿಲೋಮೀಟರ್ ಉದ್ದದ ಮೆಟ್ರೋ ಜಾಲ ವಿಸ್ತರಣೆಯ ಬಗ್ಗೆಯೂ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ಕೆಂಪೇಗೌಡ ಜಯಂತಿ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಕೆಂಪೇಗೌಡರು ಎಲ್ಲಾ ವರ್ಗದ ಜನರ ಆಸ್ತಿಯಾಗಿದ್ದು, ಅವರ ದೂರದೃಷ್ಟಿ, ಆಡಳಿತ ನೀತಿ ಹಾಗೂ ಅಭಿವೃದ್ಧಿಯ ಚಿಂತನೆಗಳನ್ನು ಅಳವಡಿಸಿಕೊಂಡು ಬೆಂಗಳೂರಿಗೆ ಹೊಸ ರೂಪ ನೀಡುವ ಸಂಕಲ್ಪದೊಂದಿಗೆ ಸರ್ಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.