

ಕೊಪ್ಪಳ, 27 ಜೂನ್ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬ ಮನುಷ್ಯ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ಕ್ರೀಡೆಯಲ್ಲಿ ಕಳೆದರೆ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಸ್ಥಾನದ ಉಪಾಧ್ಯಕ್ಷ ರಾಜು ಬಿ.ಆರ್. ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವೇ ಹೊರತು ಸೋಲು-ಗೆಲುವು ಮುಖ್ಯವಲ್ಲ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ, ಅದಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿದ್ದು, ಎಲ್ಲರೂ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಎನ್.ಎಂ. ದೊಡ್ಡಮನಿ ಮಾತನಾಡಿ, ದಿನದ 24 ಗಂಟೆಯೂ ಸೇವೆಯಲ್ಲಿ ತೊಡಗಿರುವ ಪತ್ರಕರ್ತರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಉಲ್ಲಾಸ ಸಿಗುತ್ತದೆ ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ನಾಗರಾಜ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು. ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ವೀರಣ್ಣ ಕಳ್ಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಜಿಲ್ಲಾ ಕಾರ್ಯದರ್ಶಿ ರುದ್ರಗೌಡ ಪಾಟೀಲ್, ಜಿಲ್ಲಾ ಖಜಾಂಚಿ ಫಕೀರಪ್ಪ ಗೋಟೂರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ, ಕ್ರೀಡಾ ಇಲಾಖೆಯ ತುಕಾರಾಂ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಗಾಡದಿನ್ನಿ ಉಪಸ್ಥಿತರಿದ್ದರು. ಪತ್ರಕರ್ತ ಬ್ರಹ್ಮಾನಂದ ಬಡಿಗೇರ್ ಕಾರ್ಯಕ್ರಮ ನಿರೂಪಿಸಿದರೆ, ಪತ್ರಕರ್ತ ಮಂಜುನಾಥ್ ಗೊಂಡಬಾಳ ವಂದಿಸಿದರು.
ಉದ್ಘಾಟನಾ ಸಮಾರಂಭದ ನಂತರ ಹಿರಿಯ ಪತ್ರಕರ್ತ ಎಚ್. ಹರೀಶ್ ನೇತೃತ್ವದ 'ಡಿವಿಜಿ ಕ್ರಿಕೆಟ್ ತಂಡ' ಹಾಗೂ ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ ನೇತೃತ್ವದ 'ಕುವೆಂಪು ಕ್ರಿಕೆಟ್ ತಂಡ'ಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಜರುಗಿತು. ಈ ಪಂದ್ಯದಲ್ಲಿ ಡಿವಿಜಿ ಕ್ರಿಕೆಟ್ ತಂಡ ಗೆಲುವು ಸಾಧಿಸಿತು. ಇದರೊಂದಿಗೆ ಷಟಲ್ಕಾಕ್ ಬ್ಯಾಡ್ಮಿಂಟನ್, ಚೆಸ್, ಓಟ ಹಾಗೂ ನಡಿಗೆ ಸ್ಪರ್ಧೆಗಳು ನಡೆದವು. ಸಂಘದ ಪತ್ರಕರ್ತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಈ ಸಂಧರ್ಭದಲ್ಲಿ ಕೊಪ್ಪಳ ಕೇಂದ್ರ ಹಾಗೂ ಹೋಬಳಿಯ ಪತ್ರಕರ್ತ ಸದಸ್ಯರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್