ಕೋಲಾರ ಎಪಿಎಂಸಿಯಲ್ಲಿ ಕೆಂಪೇಗೌಡರ ಜಯಂತಿ
ಕೋಲಾರ ಎಪಿಎಂಸಿಯಲ್ಲಿ ಕೆಂಪೇಗೌಡರ ಜಯಂತಿ
ಕೋಲಾರದ ಎಪಿಎಂಸಿ ಕಚೇರಿಯಲ್ಲಿ ೫೧೭ ಕೆಂಪೇಗೌಡ ಜಯಂತಿ ಅಂಗವಾಗಿ ನಾಡಪ್ರಭುವಿನ ಭಾವಚಿತ್ರಕ್ಕೆ ಎಪಿಎಂಸಿ ಕಾರ್ಯದರ್ಶಿ ಪ್ರಶಾಂತ್, ಸಹಾಯಕ ಕಾರ್ಯದರ್ಶಿ ಮುನಿರಾಜು ಪುಷ್ಪನಮನ ಸಲ್ಲಿಸಿದರು.


ಕೋಲಾರ, ೨೭ ಜೂನ್ (ಹಿ.ಸ) :

ಆ್ಯಂಕರ್ : ಸುಮಾರು ೫೦೦ ವರ್ಷಗಳ ಹಿಂದೆಯೇ ನಗರವೊಂದರ ನಿರ್ಮಾಣ, ಜನಸಮುದಾಯಕ್ಕಾಗಿ ಕೆರೆಗಳ ಕಟ್ಟುವ ಕಾಯಕ ಮಾಡಿದ ಕೆಂಪೇಗೌಡರು ನಮಗೆ ಆದರ್ಶವಾಗಿದ್ದಾರೆ ಎಂದು ಕೋಲಾರ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಎ.ಪ್ರಶಾಂತ್ ತಿಳಿಸಿದರು.

ನಗರದ ಎಪಿಎಂಸಿ ಕಚೇರಿಯಲ್ಲಿ ೫೧೭ ಕೆಂಪೇಗೌಡ ಜಯಂತಿ ಅಂಗವಾಗಿ ನಾಡಪ್ರಭುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ನೀರಿನ ಸೌಕರ್ಯ ಕಲ್ಪಿಸಿಕೊಟ್ಟರೆ ರೈತರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದನ್ನು ಕೆಂಪೇಗೌಡರು ಅಂದೇ ಅರಿತು ಕಾರ್ಯಗತಗೊಳಿಸಿದ್ದರು ಎಂದರು.

ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕಷ್ಟೇ ಸೇವೆ ಮಾಡಿರುವವರಲ್ಲ. ನಗರವನ್ನು ಈ ರೀತಿ ಕಟ್ಟಿದರೆ ಅಭಿವೃದ್ಧಿಯಾಗುತ್ತದೆ ಎನ್ನುವ ದೂರದೃಷ್ಠಿಯನ್ನು ೫೦೦ ವರ್ಷಗಳ ಹಿಂದೆಯೇ ಹೊಂದಿದ್ದ ಅವರು, ಯಾವುದೇ ತಂತ್ರಜ್ಞಾನವಿಲ್ಲದೆಯೇ ಮಹಾನಗರ ಬೆಂಗಳೂರನ್ನು ನಿರ್ಮಿಸಿದ್ದು, ಇಂದು ಇಡೀ ವಿಶ್ವವೇ ಬೆರಗಾಗಿ ನೋಡುವಂತಾಗಿದೆ ಎಂದರು.

ಎಪಿಎಂಸಿ ಸಹಾಯಕ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಬೆಂಗಳೂರನ್ನು ಎಲ್ಲ ಸಮಾಜದವರಿಗೆ ಅವರವರ ವೃತ್ತಿಗೆ ಅನುಗುಣವಾಗಿ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಂಪೇಗೌಡರು ಪೇಟೆ,ಬಡಾವಣೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು, ಅಂತಹ ವ್ಯಕ್ತಿಯ ಸ್ಮರಣೆ ಹೆಗ್ಗಳಿಕೆಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿಯ ಅರುಣಾ, ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande