ಅಕ್ರಮ ಬಡ್ಡಿ ದಂಧೆಕೋರರಿಂದ ಹಲ್ಲೆ ಆರೋಪ ; ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ಮೊರೆ
ಗದಗ, 27 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಯ ಕಿರುಕುಳ ಮತ್ತು ಹಲ್ಲೆ ಪ್ರಕರಣಗಳ ಆರೋಪಗಳು ಮತ್ತೆ ಬೆಳಕಿಗೆ ಬಂದಿದ್ದು, ನರಗುಂದ ತಾಲೂಕಿನ ಶಿರೋಳ ಗ್ರಾಮದ ಇಬ್ಬರು ಮಹಿಳೆಯರು ತಮ್ಮ ಮೇಲೆ ಬಡ್ಡಿ ದಂಧೆ ನಡೆಸುವ ವ್ಯಕ್ತಿ ಹಾಗೂ ಆತನ ಮಗ ಹಲ್ಲೆ ನಡೆಸಿ ಕಿರುಕುಳ ನೀಡಿದ್ದ
ಫೋಟೋ


ಫೋಟೋ


ಗದಗ, 27 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಯ ಕಿರುಕುಳ ಮತ್ತು ಹಲ್ಲೆ ಪ್ರಕರಣಗಳ ಆರೋಪಗಳು ಮತ್ತೆ ಬೆಳಕಿಗೆ ಬಂದಿದ್ದು, ನರಗುಂದ ತಾಲೂಕಿನ ಶಿರೋಳ ಗ್ರಾಮದ ಇಬ್ಬರು ಮಹಿಳೆಯರು ತಮ್ಮ ಮೇಲೆ ಬಡ್ಡಿ ದಂಧೆ ನಡೆಸುವ ವ್ಯಕ್ತಿ ಹಾಗೂ ಆತನ ಮಗ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಶಿರೋಳ ಗ್ರಾಮದ ಬಸವಣ್ಣೆಮ್ಮ ಅಂಗಡಿ ಹಾಗೂ ಮಹಾದೇವಿ ಮಠದ ಎಂಬ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಗ್ರಾಮದ ನಿವಾಸಿ ಸಿದ್ದಯ್ಯ ಹೊಸಮನಿ ಎಂಬುವರಿಂದ ಸಾಲ ಪಡೆದಿದ್ದಾಗಿ ತಿಳಿಸಿದ್ದಾರೆ. ಆದರೆ, ಸಾಲದ ಮೇಲೆ ವಾರದ ಬಡ್ಡಿ ಪಾವತಿಸುತ್ತಿದ್ದರೂ ಮೂಲ ಹಣ ಕಡಿಮೆಯಾಗದೇ ನಿರಂತರವಾಗಿ ಹೆಚ್ಚಿನ ಹಣ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಸವಣ್ಣೆಮ್ಮ ಅಂಗಡಿ ಅವರು ಸುಮಾರು ಮೂರು ವರ್ಷಗಳ ಹಿಂದೆ ₹3 ಲಕ್ಷ ಸಾಲ ಪಡೆದಿದ್ದರು. ಆರಂಭದಲ್ಲಿ ವಾರದ ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಾ ಬಂದಿದ್ದರೂ, ಬಳಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಬಡ್ಡಿ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಿದ್ದಯ್ಯ ಹೊಸಮನಿ ಹಾಗೂ ಆತನ ಮಗ ತಮ್ಮನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ರೀತಿಯಲ್ಲಿ ಮಹಾದೇವಿ ಮಠದ ಅವರು ಸುಮಾರು ಮೂರು ವರ್ಷಗಳ ಹಿಂದೆ ₹1.50 ಲಕ್ಷ ಸಾಲ ಪಡೆದಿದ್ದು, ವಾರದ ಬಡ್ಡಿಯನ್ನು ನಿರಂತರವಾಗಿ ಪಾವತಿಸುತ್ತಾ ಬಂದಿದ್ದರೂ ಸಾಲ ತೀರಿಲ್ಲ ಎಂದು ಹೇಳಿ ಮತ್ತೆ ಮತ್ತೆ ಹಣಕ್ಕಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಬ್ಬರೂ ಮಹಿಳೆಯರು ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದರೂ, ತಮ್ಮ ದೂರಿನ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗಂಡನನ್ನು ಕಳೆದುಕೊಂಡಿರುವ ಈ ಇಬ್ಬರು ಮಹಿಳೆಯರು ಜೀವನ ನಿರ್ವಹಣೆಯ ಸಂಕಷ್ಟದ ನಡುವೆ ಸಾಲ ಪಡೆಯುವ ಅನಿವಾರ್ಯತೆ ಎದುರಿಸಬೇಕಾಯಿತು. ಆದರೆ, ಇದೀಗ ಅಕ್ರಮ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಯಿಂದ ನಿರಂತರ ಬೆದರಿಕೆ, ಹಲ್ಲೆ ಹಾಗೂ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇವೆ ಎಂದು ಅವರು ದೂರಿದ್ದಾರೆ. ತಮ್ಮ ಹಾಗೂ ಕುಟುಂಬದ ಸದಸ್ಯರ ಜೀವಕ್ಕೆ ಅಪಾಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಮತ್ತು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿ ಅವರಿಗೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಆರೋಪಗಳು ಕೇಳಿಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆಯರ ದೂರಿನ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಕರಣದ ಸತ್ಯಾಸತ್ಯತೆ ಕುರಿತು ಪೊಲೀಸ್ ತನಿಖೆಯ ನಂತರವೇ ಸ್ಪಷ್ಟ ಚಿತ್ರಣ ದೊರೆಯಬೇಕಿದ್ದು, ಸಂತ್ರಸ್ತರಿಗೆ ನ್ಯಾಯ ದೊರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande