
ಬೆಂಗಳೂರು, 27 ಜೂನ್ (ಹಿ.ಸ.) :
ಆ್ಯಂಕರ್ : ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ, ವಿಶೇಷವಾಗಿ ವಲಸೆ ಕಾರ್ಮಿಕರ ಕುಟುಂಬಗಳ ಮಕ್ಕಳಿಗೆ ಉಚಿತ ಬೈಸಿಕಲ್ಗಳನ್ನು ಪ್ರಾಯೋಜಿಸಿದ ಲ್ಯಾಂಪ್ ಎಜುಕೇಷನಲ್ ಟ್ರಸ್ಟ್ಗೆ ಪಿಸಿಎ ಚಾರಿಟೇಬಲ್ ಟ್ರಸ್ಟ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ಈ ಬೈಸಿಕಲ್ಗಳ ನೆರವಿನಿಂದ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ತೆರಳಲು ಸಾಧ್ಯವಾಗಲಿದ್ದು, ಅವರ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ಇದು ಮಹತ್ತರ ಸಹಕಾರವಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಬೈಸಿಕಲ್ ವಿತರಣೆಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಫಲಾನುಭವಿಗಳು ಬೈಸಿಕಲ್ಗಳನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಬೇಕು, ಅವುಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಹಾಗೂ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಅಥವಾ ಬೈಸಿಕಲ್ ಅಗತ್ಯವಿಲ್ಲದ ಸಂದರ್ಭದಲ್ಲಿ ಅದನ್ನು ಟ್ರಸ್ಟ್ಗೆ ಹಿಂದಿರುಗಿಸಬೇಕು. ಹೀಗೆ ಮರಳಿದ ಬೈಸಿಕಲ್ಗಳನ್ನು ಮತ್ತೊಬ್ಬ ಅರ್ಹ ಹಾಗೂ ಅಗತ್ಯವಿರುವ ವಿದ್ಯಾರ್ಥಿಗೆ ನೀಡಲಾಗುವುದು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು, ಮಕ್ಕಳ ಶಿಕ್ಷಣಕ್ಕೆ ನೀಡುವ ಬೆಂಬಲವು ಆರೋಗ್ಯಕರ, ಸದೃಢ ಹಾಗೂ ಪ್ರಗತಿಪರ ರಾಷ್ಟ್ರ ನಿರ್ಮಾಣಕ್ಕೆ ಹೂಡಿಕೆಯಾಗಿದೆ ಎಂದು ಪಿಸಿಎ ಚಾರಿಟೇಬಲ್ ಟ್ರಸ್ಟ್ ಅಭಿಪ್ರಾಯಪಟ್ಟಿದೆ.
ಈ ಸಾಮಾಜಿಕ ಕಾಳಜಿ ಮತ್ತು ಶೈಕ್ಷಣಿಕ ಸೇವೆಗೆ ಲ್ಯಾಂಪ್ ಎಜುಕೇಷನಲ್ ಟ್ರಸ್ಟ್ಗೆ ಪಿಸಿಎ ಚಾರಿಟೇಬಲ್ ಟ್ರಸ್ಟ್ ಮತ್ತೊಮ್ಮೆ ತನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.