
ಬೆಂಗಳೂರು, 27 ಜೂನ್ (ಹಿ.ಸ.) :
ಆ್ಯಂಕರ್ : ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಬಿಜೆಪಿ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದೆ.
ಸಿ.ಟಿ. ರವಿ ಅವರ ನೇತೃತ್ವದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್. ಮಹೇಶ್ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ನಾಲ್ಕು ದಿನಗಳ ಕಾಲ ಆಂತರಿಕ ಸತ್ಯಶೋಧನೆ ನಡೆಸಿತು. ಸಾಂದರ್ಭಿಕ ಸಾಕ್ಷ್ಯಗಳು, ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ, ಅನುಮಾನಿತ ಶಾಸಕರಿಂದ ಪಡೆದ ವಿವರಗಳು ಹಾಗೂ ಲಭ್ಯ ಮಾಹಿತಿಯ ಆಧಾರದ ಮೇಲೆ ಮೂರು ಪುಟಗಳ ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಯಿತು.
ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಅಡ್ಡ ಮತದಾನ ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದರು. ಅದರಂತೆ ನಾಲ್ಕು ದಿನಗಳಲ್ಲೇ ಸಮಿತಿಯು ತನ್ನ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಸಿದೆ ಎಂದು ಹೇಳಿದರು.
ಸಮಿತಿಯ ಮೂವರು ಸದಸ್ಯರಿಗೂ ಒಮ್ಮತವಿದ್ದ ಅಂಶಗಳನ್ನೇ ವರದಿಯಲ್ಲಿ ದಾಖಲಿಸಿದ್ದೇವೆ. ಅಡ್ಡ ಮತದಾನವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ. ಇಂತಹ ಘಟನೆಗಳ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುವ ನೈತಿಕತೆಯನ್ನೂ ಕಳೆದುಕೊಂಡಿದೆ. ಮುಂದಿನ ಕ್ರಮವನ್ನು ರಾಜ್ಯಾಧ್ಯಕ್ಷರು ಹಾಗೂ ಕೋರ್ ಕಮಿಟಿ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಅಗತ್ಯವಿದ್ದರೆ ಈ ವರದಿಯನ್ನು ಹೈಕಮಾಂಡ್ಗೂ ಸಲ್ಲಿಸಲಾಗುತ್ತದೆ ಎಂದು ಸಿ.ಟಿ. ರವಿ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.