ವೆನೆಜುವೆಲಾ ಭೂಕಂಪ ; ಕನಿಷ್ಠ 235 ಸಾವು, 1,500ಕ್ಕೂ ಹೆಚ್ಚು ಮಂದಿಗೆ ಗಾಯ
ಕರಾಕಾಸ್, 26 ಜೂನ್ (ಹಿ.ಸ.) : ಆ್ಯಂಕರ್ : ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತಕ್ಕೆ ಕಾರಣವಾಗಿದ್ದು, ಇದುವರೆಗೆ ಕನಿಷ್ಠ 235 ಮಂದಿ ಮೃತಪಟ್ಟಿದ್ದಾರೆ ಹಾಗೂ 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು
ವೆನೆಜುವೆಲಾ ಭೂಕಂಪ


ಕರಾಕಾಸ್, 26 ಜೂನ್ (ಹಿ.ಸ.) :

ಆ್ಯಂಕರ್ : ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತಕ್ಕೆ ಕಾರಣವಾಗಿದ್ದು, ಇದುವರೆಗೆ ಕನಿಷ್ಠ 235 ಮಂದಿ ಮೃತಪಟ್ಟಿದ್ದಾರೆ ಹಾಗೂ 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೊದಲು ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 7.5 ತೀವ್ರತೆಯ ಮತ್ತೊಂದು ಪ್ರಬಲ ನಂತರದ ಕಂಪನ (ಆಫ್ಟರ್ಶಾಕ್) ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ತಿಳಿಸಿದೆ. ಈ ಭೂಕಂಪದ ಪರಿಣಾಮ ವೆನೆಜುವೆಲಾ ಮಾತ್ರವಲ್ಲದೆ ಕೆರಿಬಿಯನ್ ಪ್ರದೇಶದ ಹಲವು ಭಾಗಗಳಲ್ಲೂ ಕಂಡು ಬಂದಿದೆ.

ಯುಎಸಜಿಎಸ್ ಸ್ವಯಂಚಾಲಿತ ಅಪಾಯ ಮೌಲ್ಯಮಾಪನ ವ್ಯವಸ್ಥೆಯು ಇನ್ನಷ್ಟು ಪ್ರಬಲ ಆಫ್ಟರ್ಶಾಕ್ಗಳು ಸಂಭವಿಸುವ ಸಾಧ್ಯತೆಯಿದ್ದು, ಸುಮಾರು 30 ಶೇಕಡಾ ಪ್ರಮಾಣದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಕಂಪನಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದೆ. ಭೂಕುಸಿತ ಮತ್ತು ಮಣ್ಣಿನ ದ್ರವೀಕರಣ (ಲಿಕ್ವಿಫ್ಯಾಕ್ಷನ್) ಅಪಾಯವೂ ಇದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ ಸಾವಿರಾರು ತಲುಪುವ ಸಾಧ್ಯತೆಯಿದ್ದು, 10 ಸಾವಿರದಿಂದ 1 ಲಕ್ಷದವರೆಗೆ ಸಾವು ಸಂಭವಿಸುವ ಸಾಧ್ಯತೆ 42 ಶೇಕಡಾ ಇದೆ ಎಂದು ಯುಎಸಜಿಎಸ್ ಅಂದಾಜಿಸಿದೆ. ಈ ದುರಂತದಿಂದ 10 ಬಿಲಿಯನ್ನಿಂದ 100 ಬಿಲಿಯನ್ ಅಮೆರಿಕನ್ ಡಾಲರ್ಗಳವರೆಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.

ವೆನೆಜುವೆಲಾ ಭೂಕಂಪದ ಅಪಾಯ ಹೆಚ್ಚಿರುವ ಪ್ರದೇಶವಾಗಿದ್ದು, ಇದು ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕದ ಟೆಕ್ಟೋನಿಕ್ ಫಲಕಗಳ ಗಡಿಭಾಗದಲ್ಲಿದೆ. ಇತ್ತೀಚಿನ ಭೂಕಂಪಗಳು ದೇಶದ ಅತ್ಯಂತ ಸಕ್ರಿಯ ಮತ್ತು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಬೊಕೊನೊ ಫಾಲ್ಟ್ ಸಮೀಪ ಸಂಭವಿಸಿವೆ. ದೇಶದ ಸುಮಾರು 80 ಶೇಕಡಾ ಜನಸಂಖ್ಯೆ ಭೂಕಂಪದ ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದೆ ಎಂದು ವೆನೆಜುವೆಲಾದ ಭೂಕಂಪ ಸಂಶೋಧನಾ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ರೆಡ್ಕ್ರಾಸ್ ಒಕ್ಕೂಟ ವೆನೆಜುವೆಲಾಗೆ 40 ಟನ್ ಮಾನವೀಯ ನೆರವಿನ ಮೊದಲ ಕಂತು ಕಳುಹಿಸಿದ್ದು, ತುರ್ತು ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಅಲ್ಲದೆ, ಐಬೇರಿಯಾ, ಏರ್ ಯುರೋಪಾ, ಕೋಪಾ ಏರ್ಲೈನ್ಸ್, ಅವಿಯಾಂಕಾ ಹಾಗೂ ಲತಾಮ್ ಏರ್ಲೈನ್ಸ್ ಕರಾಕಾಸ್ಗೆ ತಮ್ಮ ವಿಮಾನ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿವೆ.

ಅಮೆರಿಕ ಸರ್ಕಾರವೂ ವೆನೆಜುವೆಲಾಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಗಳಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಸ್ಪ್ಯಾನಿಷ್ ಭಾಷಾ ವಕ್ತಾರ ನಟಾಲಿಯಾ ಮೊಲಾನೊ ಅವರ ಪ್ರಕಾರ, ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ವಿವಿಧ ಫೆಡರಲ್ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ ತುರ್ತು ನೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande