
ಕರಾಕಾಸ್, 25 ಜೂನ್ (ಹಿ.ಸ.) :
ಆ್ಯಂಕರ್ : ವೆನೆಜುವೆಲಾದ ಕರಾವಳಿ ಭಾಗದ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶದಾದ್ಯಂತ ಆತಂಕದ ವಾತಾವರಣ ಸೃಷ್ಟಿಸಿವೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಭೂಕಂಪಗಳು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ್ದು, ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ಅಲುಗಾಡಿ ಕೆಲವೆಡೆ ಕುಸಿದಿರುವ ವರದಿಯಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಯುಎಸ್ಜಿಎಸ್) ಮಾಹಿತಿ ಪ್ರಕಾರ, ಮೊದಲ ಭೂಕಂಪವು ಮೊರೋನ್ ಪಟ್ಟಣದ ಸಮೀಪ ಭೂಮಿಯ ಸುಮಾರು 22 ಕಿಲೋಮೀಟರ್ ಆಳದಲ್ಲಿ ದಾಖಲಾಗಿತ್ತು. ಅದರ ಕೆಲವೇ ಕ್ಷಣಗಳ ಬಳಿಕ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಮೊರೋನ್ನ ನೈಋತ್ಯ ಭಾಗದಲ್ಲಿದೆ ಎಂದು ತಿಳಿಸಲಾಗಿದೆ.
ಭೂಕಂಪದ ತೀವ್ರತೆಗೆ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಜನರು ಭಯಭೀತರಾಗಿ ಮನೆಗಳು, ಕಚೇರಿಗಳು ಮತ್ತು ವಾಣಿಜ್ಯ ಕಟ್ಟಡಗಳಿಂದ ಹೊರಗೆ ಧಾವಿಸಿದರು. ಕೆಲ ಪ್ರದೇಶಗಳಲ್ಲಿ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ಹಳೆಯ ಕಟ್ಟಡಗಳ ಭಾಗಗಳು ಕುಸಿದಿವೆ. ರಸ್ತೆಗಳಲ್ಲಿ ಅವಶೇಷಗಳು ಬಿದ್ದಿರುವ ದೃಶ್ಯಗಳು ಕಂಡುಬಂದಿದ್ದು, ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಭೂಕಂಪದ ಪರಿಣಾಮ ಹಲವೆಡೆ ವಿದ್ಯುತ್ ಸರಬರಾಜು ಮತ್ತು ಮೊಬೈಲ್ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಂಡಿರುವುದರಿಂದ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಕಂಬಗಳು ಉರುಳಿರುವ ಕಾರಣ ಸಂಚಾರ ವ್ಯವಸ್ಥೆಯ ಮೇಲೂ ಪರಿಣಾಮ ಬಿದ್ದಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ವೆನೆಜುವೆಲಾದ ಪ್ರಮುಖ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ ತುರ್ತು ನಿರ್ವಹಣಾ ತಂಡಗಳನ್ನು ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದ್ದು, ಸಂಭವನೀಯ ಸಾವುನೋವು ಹಾಗೂ ಆಸ್ತಿ ಹಾನಿಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಭೂಕಂಪದ ಕಂಪನಗಳು ನೆರೆಯ ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಅನುಭವವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಕಟ್ಟಡಗಳನ್ನು ಖಾಲಿ ಮಾಡಲಾಗಿದೆ. ಭೂಕಂಪದ ನಂತರವೂ ಸಣ್ಣ ಪ್ರಮಾಣದ ಕಂಪನಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕಳೆದ ಹಲವು ದಶಕಗಳಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇದೂ ಒಂದೆಂದು ಪರಿಗಣಿಸಲಾಗುತ್ತಿದ್ದು, ಹಾನಿಯ ನಿಖರ ಚಿತ್ರಣ ಇನ್ನಷ್ಟೇ ಹೊರಬೀಳಬೇಕಿದೆ. ದೇಶಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ನಿರಂತರವಾಗಿ ಮುಂದುವರಿದಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.