
ದೋಹಾ, 23 ಜೂನ್ (ಹಿ.ಸ.) :
ಆ್ಯಂಕರ್ : ಕತಾರ್ ರಾಸ್ ಲಾಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಭಾರತೀಯರು ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಸದ್ಯ ಸ್ಥಿರವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಮಾಹಿತಿ ನೀಡಿದ್ದು, ಮೃತ ಭಾರತೀಯರ ಪಾರ್ಥಿವ ಶರೀರಗಳನ್ನು ಶೀಘ್ರವೇ ಭಾರತಕ್ಕೆ ರವಾನಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದೆ.
ರಾಜಧಾನಿ ದೋಹಾದಿಂದ ಸುಮಾರು 80 ಕಿಲೋಮೀಟರ್ ಈಶಾನ್ಯ ದಿಕ್ಕಿನಲ್ಲಿರುವ ರಾಸ್ ಲಾಫಾನ್ ಕೈಗಾರಿಕಾ ನಗರವು ಕತಾರ್ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಸುಮಾರು 1.15 ಲಕ್ಷ ಜನರು ಉದ್ಯೋಗ ನಿರ್ವಹಿಸುತ್ತಿದ್ದಾರೆ.
ಕತಾರ್ ಎನರ್ಜಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇಂಧನ ವ್ಯವಹಾರಗಳ ರಾಜ್ಯ ಸಚಿವ ಸಾದ್ ಶೆರಿದಾ ಅಲ್-ಕಾಬಿ ಅವರು ಸುದ್ದಿಗೋಷ್ಠಿಯಲ್ಲಿ ದುರಂತವನ್ನು ದೃಢಪಡಿಸಿದ್ದಾರೆ. ಅವರ ಪ್ರಕಾರ, ಜೂನ್ 21ರ ರಾತ್ರಿ ಸುಮಾರು 10.30 ಗಂಟೆಗೆ ಈ ಸ್ಫೋಟ ಸಂಭವಿಸಿದೆ. ಇದು ಅಪಘಾತವಾಗಿದ್ದು, ಯಾವುದೇ ವಿಧ್ವಂಸಕ ಕೃತ್ಯ ಅಥವಾ ದುಷ್ಕೃತ್ಯದ ಪರಿಣಾಮವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾವನ್ನಪ್ಪಿದವರಲ್ಲಿ ಭಾರತೀಯರು ಮತ್ತು ಪಾಕಿಸ್ತಾನಿ ಪ್ರಜೆಗಳಿದ್ದಾರೆ ಎಂದು ತಿಳಿಸಿದ ಅವರು, ಗಾಯಗೊಂಡ 66 ಮಂದಿಯ ಪೈಕಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ. ಗಾಯಾಳುಗಳಲ್ಲಿ ಕತಾರ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೀನ್ಯಾ, ಇರಾನ್, ಟಾಂಜಾನಿಯಾ, ನೈಜೀರಿಯಾ ಮತ್ತು ನೇಪಾಳದ ನಾಗರಿಕರು ಸೇರಿದ್ದಾರೆ.
ವಿಶೇಷವೆಂದರೆ, ಬರ್ಜಾನ್ ಅನಿಲ ಘಟಕವನ್ನು ಅಗತ್ಯ ನಿರ್ವಹಣಾ ಕಾಮಗಾರಿಗಳಿಗಾಗಿ 2025ರ ಡಿಸೆಂಬರ್ನಿಂದ ಮುಚ್ಚಲಾಗಿತ್ತು. ನಿರ್ವಹಣಾ ಕಾರ್ಯ ಪೂರ್ಣಗೊಂಡ ನಂತರ ಘಟಕವನ್ನು ದುರಂತ ಸಂಭವಿಸುವುದಕ್ಕೆ ಕೇವಲ ಎರಡು ದಿನಗಳ ಮುನ್ನವೇ ಪುನರಾರಂಭಿಸಲಾಗಿತ್ತು.
ಅಪಘಾತ ಸಂಭವಿಸಿದ ತಕ್ಷಣ ಕತಾರ್ ಎನರ್ಜಿ ಸಂಸ್ಥೆಯ ತುರ್ತು ಸ್ಪಂದನಾ ತಂಡ ಹಾಗೂ ನಾಗರಿಕ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
2022ರಲ್ಲಿ ಕಾರ್ಯಾರಂಭ ಮಾಡಿದ ಬರ್ಜಾನ್ ಸಂಕೀರ್ಣವು ಕತಾರ್ನ ಒಳನಾಡು ಅನಿಲ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಘಟಕವು ವಿದ್ಯುತ್ ಉತ್ಪಾದನಾ ಕೇಂದ್ರಗಳು, ಸಮುದ್ರದ ನೀರನ್ನು ಸಿಹಿನೀರಾಗಿಸುವ ಘಟಕಗಳು ಹಾಗೂ ವಿವಿಧ ಕೈಗಾರಿಕೆಗಳಿಗೆ ಪ್ರತಿದಿನ 1.4 ಬಿಲಿಯನ್ ಪ್ರಮಾಣಿತ ಘನ ಅಡಿ ಅನಿಲ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸ್ಥಳೀಯ ಮಾರುಕಟ್ಟೆ ಮತ್ತು ರಫ್ತಿಗಾಗಿ ಇಥೇನ್, ಕಂಡೆನ್ಸೇಟ್ ಮತ್ತು ಗಂಧಕ ಸೇರಿದಂತೆ ವಿವಿಧ ಹೈಡ್ರೋಕಾರ್ಬನ್ ಉತ್ಪನ್ನಗಳನ್ನೂ ಪೂರೈಸುತ್ತದೆ.
ಈ ದುರಂತವು ಕತಾರ್ನ ಇಂಧನ ಕ್ಷೇತ್ರದಲ್ಲಿ ಆತಂಕ ಮೂಡಿಸಿದ್ದು, ಘಟನೆಯ ನಿಖರ ಕಾರಣ ಮತ್ತು ಸುರಕ್ಷತಾ ಕ್ರಮಗಳ ಕುರಿತು ತನಿಖೆಯ ಫಲಿತಾಂಶಕ್ಕಾಗಿ ಕಾದು ನೋಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.