ಶುಕ್ರವಾರದಿಂದಲೇ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಯೋಜನೆ ಜಾರಿ
ಶುಕ್ರವಾರದಿಂದಲೇ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಯೋಜನೆ ಜಾರಿ
ತೋತಾಪುರಿ ಮಾವಿನ ಹಣ್ಣಿನ ಸಾಂದರ್ಭಿಕ ಚಿತ್ರ


ಕೋಲಾರ: ೨೬ ಜೂನ್ (ಹಿ.ಸ) :

ಆ್ಯಂಕರ್ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಾಲ್ ತೋತಾಪುರಿ ಮಾವಿಗೆ ರೂ. ೧,೭೫೦ ಗಳ ಬೆಲೆ ವ್ಯತ್ಯಾಸದ ಮೊತ್ತವನ್ನು ನಿಗದಿಪಡಿಸಿದ್ದು, ಜಿಲ್ಲೆಯ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಇಂದಿನಿAದಲೇ ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತೋತಾಪುರಿ ಮಾವು ಬೆಳೆದ ರೈತರು ತಕ್ಷಣವೇ ತಮಗೆ ಹತ್ತಿರವಿರುವ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುವ ಮೂಲಕ ಆನ್ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ಆನ್ಲೈನ್ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು ಸ್ವೀಕೃತಿ ಪತ್ರ ಕೈ ಸೇರಿದ ನಂತರವೇ ಮಾವು ಕಟಾವು ಮಾಡಿ ಮಾರಾಟ ಪ್ರಕ್ರಿಯೆ ಆರಂಭಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ರೈತರು ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ನೋಂದಣಿ ಮಾಡಿಕೊಳ್ಳಲು ಜಿಲ್ಲಾದ್ಯಂತ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಎಪಿಎಂಸಿ ಆವರಣಗಳಲ್ಲಿ ವಿಶೇಷ ಕೌಂಟರ್ಗಳನ್ನು ತೆರೆಯಲಾಗಿದೆ. ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಒಟ್ಟು ೪೭ ಜನ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಶ್ರೀನಿವಾಸಪುರ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಹಾಗೂ ಎಪಿಎಂಸಿ ಕಛೇರಿ. ಮುಳಬಾಗಿಲು ತಾಲ್ಲೂಕಿನ ದುಗಸಂದ್ರ ಹೋಬಳಿ ಮತ್ತು ತಾಯಲೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಎಪಿಎಂಸಿ ಮಾರುಕಟ್ಟೆ. ಕೆ.ಜಿ.ಎಫ್ ತಾಲ್ಲೂಕಿ ಕ್ಯಾಸಂಬಹಳ್ಳಿ ಮತ್ತು ಬೇತಮಂಗಲ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು. ಬಂಗಾರಪೇಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ. ಕೋಲಾರ ತಾಲ್ಲೂಕಿನ ಹೋಳೂರು ಮತ್ತು ಸುಗಟೂರು ರೈತ ಸಂಪರ್ಕ ಕೇಂದ್ರಗಳು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ.

ನೋಂದಾಯಿತ ರೈತರು ಕೋಲಾರ ಜಿಲ್ಲೆಯ ಎಪಿಎಂ.ಸಿ ಶ್ರೀನಿವಾಸಪುರ, ಎಪಿಎಂಸಿ ಮುಳಬಾಗಿಲು, ತಾಯಲೂರು ಉಪ ಮಾರುಕಟ್ಟೆ ಹಾಗೂ ಜಿಲ್ಲೆಯ ಪ್ರಮುಖ ಮುಂಚೂಣಿ ತಂತ್ರಜ್ಞಾನದ ಸಂಸ್ಕರಣಾ ಘಟಕಗಳಾದ ಸನ್ಶಿಫ್ ಅಸ್ಥೇಟಿಕ್ ಮತ್ತು ಐಕ್ಯೂಎಫ್ ಘಟಕಗಳಲ್ಲಿ ತಮ್ಮ ಮಾವನ್ನು ನಿಗದಿತ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಮಾರುಕಟ್ಟೆಯ ಏರಿಳಿತಗಳಿಂದ ರೈತರನ್ನು ರಕ್ಷಿಸಲು ಸರ್ಕಾರ ಹಮ್ಮಿಕೊಂಡಿರುವ ಈ ಮಹತ್ವದ ಯೋಜನೆಯನ್ನು ಜಿಲ್ಲೆಯ ಎಲ್ಲಾ ಮಾವು ಬೆಳೆಗಾರರು ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾಡಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ವಿನಂತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande