
ಕೋಲಾರ, ೨೬ ಜೂನ್ (ಹಿ.ಸ) :
ಆ್ಯಂಕರ್ : ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಗುರುತಿಸಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಶುಕ್ರವಾರ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ೨೦ ಅತ್ಯುತ್ತಮ ಸರ್ಕಾರಿ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ ಅತ್ಯುತ್ತಮ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿವೆ. ಹಳ್ಳಿಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆಯಿದ್ದರೂ ಧೃತಿಗೆಡದೆ, ಅವಿರತವಾಗಿ ಮತ್ತು ಭಗೀರಥನಂತೆ ಶ್ರಮಿಸುತ್ತಾ ಯುವ ಪೀಳಿಗೆಗೆ ಶಿಕ್ಷಕರು ಮುಂದಿನ ದಾರಿಯಾಗಿದ್ದಾರೆ ಸರ್ಕಾರಿ ಶಾಲೆಗಳ ಶಿಕ್ಷಕರ ಅಪಾರ ತ್ಯಾಗ, ಧೈರ್ಯ, ಸಮಯಪ್ರಜ್ಞೆ ಹಾಗೂ ಸೃಜನಶೀಲ ನಾಯಕತ್ವವನ್ನು ಮಕ್ಕಳಿಗೆ ಧಾರೆ ಎರೆಯುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಇಂತಹ ಸಾಧಕರನ್ನು ಗೌರವಿಸುವುದು ನಮಗೆ ಸಿಕ್ಕ ದೊಡ್ಡ ಸೌಭಾಗ್ಯ ಎಂದರು.
ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಾದವರಲ್ಲ. ಅವರು ಸರ್ವ ಜನಾಂಗವನ್ನು ಸಮಾನ ದೃಷ್ಟಿಯಿಂದ ಕಂಡು, ಯುವಕರಿಗೆ ವಿಶೇಷ ಸ್ಥಾನಮಾನ ನೀಡಿ ಬೆಂಗಳೂರನ್ನು ಕಟ್ಟಿದರು. ಅಂದು ಅವರು ಹಾಕಿಕೊಟ್ಟ ಭದ್ರ ಬುನಾದಿಯ ಕಾರಣದಿಂದಲೇ ಇಂದು ಬೆಂಗಳೂರು ನಗರವು ಇಡೀ ಜಗತ್ತೇ ತಿರುಗಿ ನೋಡುವಂತಹ ಜಾಗತಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಇಂತಹ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ನೂರು ರಾಜೀವ್ ಶೆಟ್ಟಿ ಮಾತನಾಡಿ ತುರ್ತು ರಕ್ತ ನಿಧಿ ಸೇವೆ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ, ಉಚಿತ ಆರೋಗ್ಯ ಶಿಬಿರಗಳು ಹಾಗೂ ಪ್ರಥಮ ಚಿಕಿತ್ಸಾ ತರಬೇತಿಗಳ ಮೂಲಕ ಮಾನವೀಯತೆಯ ಆಧಾರದ ಮೇಲೆ ರೆಡ್ ಕ್ರಾಸ್ ಜಗತ್ತಿನಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಯುವಜನತೆ ಇಂತಹ ಸಂಸ್ಥೆಗಳೊAದಿಗೆ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಆಡಳಿತ ಮಂಡಳಿ ಸದಸ್ಯ ರಾಮನಗರ ಬಾಲಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಕೆ.ಎಸ್ ಗಣೇಶ್, ಸೇಂಟ್ ಜಾನ್ಸ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್, ರೋಟರಿ ಸೆಂಟ್ರಲ್ ಅಧ್ಯಕ್ಷ ಸುಧಾಕರ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಕೋಶಾಧ್ಯಕ್ಷ ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್