
ಕೋಲಾರ : ೨೬ ಜೂನ್ (ಹಿ.ಸ) :
ಆ್ಯಂಕರ್ : ಸರ್ಕಾರ ನಿಗದಿಪಡಿಸಿರುವ ಮಾವು ಬೆಲೆ ವ್ಯತ್ಯಾಸ ಪಾವತಿ ಯೋಜನೆ ಲಾಭ ಪ್ರತಿಯೊಬ್ಬ ಅರ್ಹ ಮಾವು ಬೆಳೆಗಾರನಿಗೂ ತಲುಪಬೇಕು ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದ0ತೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಮಾವು ಬೆಳೆಗೆ ಪಿ.ಡಿ.ಪಿ.ಎಸ್ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ ೧,೭೫೦ ರೂಪಾಯಿ ನಿಗದಿಪಡಿಸಿ ನಿನ್ನೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಇಂದು ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಮಾವಿನ ತೋಟಗಳಿಗೆ ಹಾಗೂ ಶ್ರೀನಿವಾಸಪುರ ಕೃಷಿ ಮಾರುಕಟ್ಟೆ ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಸೂಚನೆ ನೀಡಿದರು.
ಶ್ರೀನಿವಾಸಪುರ ತಾಲ್ಲೂಕಿನ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾದ ದಿಂಬಾಲ, ಚಾಮಪಲ್ಲಿ ಸೇರಿದಂತೆ ವಿವಿಧ ಮಾವಿನ ತೋಟಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಸಾಲಿನ ಮಾವಿನ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಮಾವು ಬೆಳೆಗಾರರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿದ ಅವರು, ಮಾರುಕಟ್ಟೆಯಲ್ಲಿನ ಪ್ರಸ್ತುತ ಧಾರಣೆ, ಇಳುವರಿ ಪ್ರಮಾಣ ಹಾಗೂ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಸವಿಸ್ತಾರವಾದ ಮಾಹಿತಿ ಪಡೆದುಕೊಂಡರು.
ಸರ್ಕಾರದ ಆರ್ಥಿಕ ನೆರವು ಸಕಾಲದಲ್ಲಿ ರೈತರ ಕೈಸೇರುವಂತಾಗಲು ಜಿಲ್ಲಾಡಳಿತ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ರೈತರಿಗೆ ಭರವಸೆ ನೀಡಿದರು.
ತೋಟಗಳ ವೀಕ್ಷಣೆಯ ನಂತರ ಜಿಲ್ಲಾಧಿಕಾರಿಗಳು ರೋಣೂರು ನಲ್ಲಿ ಸ್ಥಾಪಿಸಲಾಗಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮುಂದುವರಿಸಿದರು. ಮಾವು ಬೆಲೆ ವ್ಯತ್ಯಾಸ ಪಾವತಿಗಾಗಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿರುವ ವಿಧಾನವನ್ನು ಅವರು ಹತ್ತಿರದಿಂದ ವೀಕ್ಷಿಸಿದರು.
ತೋಟಗಾರಿಕಾ ಇಲಾಖೆಯ ವತಿಯಿಂದ ರೈತರ ನೋಂದಣಿಗಾಗಿ ಮಾಡಿಕೊಳ್ಳಲಾಗಿರುವ ಕೌಂಟರ್ಗಳ ವ್ಯವಸ್ಥೆ ಹಾಗೂ ಕೈಗೊಳ್ಳಲಾಗಿರುವ ಪೂರ್ವಸಿದ್ಧತೆಗಳನ್ನು ಕುಲಂಕಷವಾಗಿ ಪರಿಶೀಲಿಸಿದ ಅವರು, ಇಡೀ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಅಥವಾ ವಿಳಂಬ ನೀತಿಗೆ ಆಸ್ಪದ ನೀಡಬಾರದು ಎಂದು ತಾಕೀತು ಮಾಡಿದರು.
ರೈತರು ಕೌಂಟರ್ಗಳ ಮುಂದೆ ಸುದೀರ್ಘ ಸಮಯ ಕಾಯುವುದನ್ನು ತಪ್ಪಿಸಲು ಅಗತ್ಯವಿರುವ ಕಡೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಯೋಜನೆಯ ಬಗ್ಗೆ ತಾಲ್ಲೂಕಿನ ಪ್ರತಿಯೊಬ್ಬ ಮಾವು ಬೆಳೆಗಾರನಿಗೂ ತಿಳಿಯುವಂತೆ ವ್ಯಾಪಕ ಜಾಗೃತಿ ಮೂಡಿಸಬೇಕಾದ್ದು ಇಲಾಖೆಯ ಕರ್ತವ್ಯವಾಗಿದೆ ಎಂದು ಅವರು ಸ್ಮರಿಸಿದರು.
ಜಿಲ್ಲಾಧಿಕಾರಿಗಳ ಈ ಭೇಟಿಯ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಿವಾಸನ್, ಪ್ರಮುಖ ರೈತ ಮುಖಂಡರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್